ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕಾರ್ಮಿಕ ಸಂಹಿತೆಗಳು ಮಧ್ಯಮ ಅವಧಿಯಲ್ಲಿ ದೇಶದ ಉದ್ಯೋಗ ಪರಿಸ್ಥಿತಿಗೆ ಮಹತ್ವದ ಬದಲಾವಣೆ ತರಲಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಂಶೋಧನಾ ವಿಭಾಗ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ವರದಿಯ ಪ್ರಕಾರ, ಹೊಸ ಕಾರ್ಮಿಕ ಕಾನೂನುಗಳ ಅನುಷ್ಠಾನದಿಂದಾಗಿ ಮುಂದಿನ ಹಂತದಲ್ಲಿ ನಿರುದ್ಯೋಗವು ಶೇಕಡಾ 1.3ರಷ್ಟು ಕಡಿಮೆಯಾಗುವ ಸಾಧ್ಯತೆಯಿದ್ದು, ಸುಮಾರು 77 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಅಂದಾಜು 15 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯ ಕಾರ್ಮಿಕ ಬಲದ ಆಧಾರದ ಮೇಲೆ ಮಾಡಲಾಗಿದೆ.
ಉದ್ಯೋಗದ ಏರಿಕೆಯೊಂದಿಗೆ ದೇಶೀಯ ಬಳಕೆಗೂ ಉತ್ತೇಜನ ಸಿಗಲಿದೆ. ವರದಿ ಪ್ರಕಾರ, ಜನರಿಗೆ ಹೊಸ ಆದಾಯ ಸಿಗುವುದರಿಂದ ಪ್ರತಿ ವ್ಯಕ್ತಿಗೆ ದಿನಕ್ಕೆ ಸರಾಸರಿ ₹66ರಷ್ಟು ಹೆಚ್ಚುವರಿ ಖರ್ಚು ಸಾಧ್ಯ. ಇದು ಒಟ್ಟು ಸುಮಾರು ₹75,000 ಕೋಟಿಗಳ ಬಳಕೆ ಏರಿಕೆಗೆ ಕಾರಣವಾಗಬಹುದು ಎಂದು ವರದಿ ಸೂಚಿಸಿದೆ.
ಎಸ್‌ಬಿಐ ಗ್ರೂಪ್ ಮುಖ್ಯ ಆರ್ಥಿಕ ಸಲಹೆಗಾರ ಡಾ. ಸೌಮ್ಯ ಕಾಂತಿ ಘೋಷ್ ಹೇಳುವಂತೆ, “ಕಾರ್ಮಿಕ ಸಂಹಿತೆಗಳು ಜಾರಿಯಾಗುವುದರಿಂದ ಬಳಕೆಗೆ ದೊಡ್ಡ ಮಟ್ಟದ ಉತ್ತೇಜನ ದೊರೆಯಲಿದೆ ಮತ್ತು ಆರ್ಥಿಕ ಚಟುವಟಿಕೆಗಳು ಮತ್ತಷ್ಟು ವೇಗ ಪಡೆಯಲಿವೆ.”
ಭಾರತದಲ್ಲಿ ಒಟ್ಟು ಸುಮಾರು 44 ಕೋಟಿ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ 31 ಕೋಟಿಯವರು ಈಗಾಗಲೇ ಇ–ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿತರಾಗಿದ್ದಾರೆ.
ವರದಿ ಪ್ರಕಾರ, ಅಸಂಘಟಿತ ವಲಯದ ಕನಿಷ್ಠ 20% ವೇತನದಾರರು ಮುಂದಿನ ವರ್ಷಗಳಲ್ಲಿ ಔಪಚಾರಿಕ ವ್ಯವಸ್ಥೆಗೆ ಪ್ರವೇಶಿಸಬಹುದು, ಇದರಿಂದ ಸುಮಾರು 10 ಕೋಟಿ ಜನರಿಗೆ ಸಾಮಾಜಿಕ ಭದ್ರತಾ ಪ್ರಯೋಜನ ಸಿಗುತ್ತದೆ.
ಪಿಎಲ್‌ಎಫ್‌ಎಸ್ ದತ್ತಾಂಶದ ಪ್ರಕಾರ, ಈಗ ಭಾರತದಲ್ಲಿ ಔಪಚಾರಿಕ ಕಾರ್ಮಿಕರ ಪ್ರಮಾಣ ಶೇಕಡಾ 60.4. ಹೊಸ ಕಾರ್ಮಿಕ ಸಂಹಿತೆಗಳ ಪರಿಣಾಮವಾಗಿ ಇದು ಶೇಕಡಾ 75.5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಸರ್ಕಾರ ಈಗಾಗಲೇ ನಾಲ್ಕು ಸಮಗ್ರ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದ್ದು, 2019 ಮತ್ತು 2020 ರಲ್ಲಿ ಸಂಸತ್ತು ಪಾಸಾದ ಈ ಕಾನೂನುಗಳು — ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು ಮತ್ತು ಉದ್ಯೋಗ ಪರಿಸ್ಥಿತಿಗಳನ್ನು ಒಳಗೊಂಡಿವೆ.
ಈ ಸಂಹಿತೆಗಳ ಜಾರಿಗೆ, ದೇಶದ ಕಾರ್ಮಿಕ ಮಾರುಕಟ್ಟೆ ಮತ್ತಷ್ಟು ಸಂಘಟಿತ, ಸ್ಥಿರ ಮತ್ತು ಸ್ಪರ್ಧಾತ್ಮಕ ವ್ಯವಸ್ಥೆಗೆ ದಾರಿ ಮಾಡಿಕೊಡಲಿದೆ ಎಂದು ವರದಿ ಅಭಿಪ್ರಾಯ ವ್ಯಕ್ತಪಡಿಸಿದೆ.






















































