ದೊಡ್ಡಬಳ್ಳಾಪುರ: ಜನ್ಮ ಪಡೆದ ಕೆಲವೇ ವಾರಗಳ ನವಜಾತ ಗಂಡು ಶಿಶುವನ್ನು ಮಾನವೀಯತೆ ಮರೆತ ಪಾಪಿಗಳು ಬೀದಿಯಲ್ಲೇ ಬಿಸಾಡಿ ಹೋದ ಹೃದಯ ಕಲುಕುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪೆರಮಗೊಂಡನಹಳ್ಳಿ ಲೇಔಟ್ ಬಳಿ ನಡೆದಿದೆ.
ಮಗು ಅಳುವ ಶಬ್ದ ಕೇಳಿ ಸ್ಥಳೀಯ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿ, ಮಗು ಜೀವಂತವಾಗಿರುವುದನ್ನು ಕಂಡು ಸಹಾಯವಾಣಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಮಗು ತೀವ್ರ ಹಸಿವಿನಿಂದ ಅಳುತ್ತಿದ್ದುದರಿಂದ ಗ್ರಾಮದ ಆಂಜಿನಮ್ಮ ಕುಟುಂಬವು ಹಾಲುಣಿಸಿ ಮಾನವೀಯತೆ ಮೆರೆದಿದೆ. ನಂತರ ಮಕ್ಕಳ ಸಹಾಯವಾಣಿ ತಂಡ ಸ್ಥಳಕ್ಕೆ ಬಂದು ಮಗುವನ್ನು ವಶಕ್ಕೆ ಪಡೆದಿದೆ.
ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪಾಪಿ ಪೋಷಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಮತ್ತೆ ಸಮಾಜದಲ್ಲಿ ಮಾನವೀಯತೆ ಹಾಗೂ ಮಕ್ಕಳ ರಕ್ಷಣೆಯ ಅಗತ್ಯತೆಯ ಬಗ್ಗೆ ಚಿಂತನೆ ಮೂಡಿಸಿದೆ.



























































