ಬೆಂಗಳೂರು: “ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಆಗಸ್ಟ್ 5 ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು. ನಂತರ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ವಿವರ ಒದಗಿಸಿದ ಅವರು, “ಮತದಾರರ ಹಕ್ಕು, ಸಂವಿಧಾನದ ರಕ್ಷಣೆ ಮಾಡಬೇಕಿದೆ. ಕರ್ನಾಟಕದ ಭೂಮಿಯಿಂದಲೇ ಈ ಹೋರಾಟ ಪ್ರಾರಂಭ ಮಾಡಿದರೆ ಹೆಚ್ಚಿನ ಶಕ್ತಿ ದೊರೆಯುತ್ತದೆ ಎಂದು ರಾಹುಲ್ ಗಾಂಧಿಯವರು ಇಲ್ಲಿಂದ ಪ್ರಾರಂಭ ಮಾಡುತ್ತಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಆದಂತಹ ಹಲವಾರು ಲೋಪದೋಷಗಳನ್ನು ನಮ್ಮ ನಾಯಕರು ಎತ್ತಿಹಿಡಿಯಲಿದ್ದಾರೆ” ಎಂದು ತಿಳಿಸಿದರು.
“ನಮ್ಮ ಸರ್ಕಾರವೇ ಮಾಡಿರುವ ನಿಯಮಗಳು ಹಾಗೂ ನ್ಯಾಯಾಲಯ ನೀಡಿರುವ ನಿರ್ದೇಶನದ ಮೇರೆಗೆ ಪ್ರತಿಭಟನೆ ನಡೆಸಲಾಗುವುದು. ಮುಖಂಡರು, ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಲಾಗಿದೆ. ರಾಜ್ಯದ ಎಲ್ಲಾ ಬ್ಲಾಕ್ ಗಳಿಂದ ಪ್ರತಿನಿಧಿಗಳು ಹಾಜರಾಗಬೇಕು ಎಂದು ಆಹ್ವಾನ ನೀಡಲಾಗಿದೆ” ಎಂದರು.
ಕರಡು ಮತದಾರರ ಪಟ್ಟಿಯ ಬಗ್ಗೆ ಏಕೆ ಕಾಂಗ್ರೆಸ್ ಈ ಮೊದಲೇ ಆಕ್ಷೇಪಣೆ ಸಲ್ಲಿಸಲಿಲ್ಲ ಎಂದಾಗ, “ನಾವು ಆಕ್ಷೇಪಣೆ ಸಲ್ಲಿಸಿದ್ದೆವು ಆದರೆ ಚುನಾವಣಾ ಆಯೋಗ ಅದನ್ನು ಸ್ವೀಕರಿಸಲಿಲ್ಲ. ಮಹದೇವರಪುರ ಕ್ಷೇತ್ರದಲ್ಲಿ ಅಭ್ಯರ್ಥಿ ನಾಗೇಶ್ ಅವರು ಹಾಗೂ ಅವರ ಮಗ ದಾಖಲೆಗಳನ್ನು ತೊರಿಸಿದರು. ದಿನೇಶ್ ಗುಂಡೂರಾವ್ ಕ್ಷೇತ್ರ ಗಾಂಧಿನಗರದಲ್ಲೂ ಇದೇ ರೀತಿ ನಡೆದಿದೆ. ಇಲ್ಲಿ ಒಂದು ವಾರ್ಡ್ ನಲ್ಲಿ 7 ಸಾವಿರದಷ್ಟು ಮತದಾರರ ಸೇರ್ಪಡೆಯಾಗಿದೆ” ಎಂದರು.
ಪಾದಯಾತ್ರೆ ಎಲ್ಲಿಂದ ಎಲ್ಲಿಯವರೆಗೆ ಇರಲಿದೆ ಎಂದು ಕೇಳಿದಾಗ, “ನಾವು ಪಾದಯಾತ್ರೆ ಮಾಡುತ್ತಿಲ್ಲ. ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿ ನಮ್ಮ ವಿಚಾರ ಜನರಿಗೆ ತಿಳಿಸುತ್ತೇವೆ. ನಂತರ ಐದಾರು ನಾಯಕರು ಚುನಾವಣಾ ಆಯೋಗ ಕಚೇರಿಗೆ ಹೋಗಿ ಮನವಿ ಸಲ್ಲಿಸುತ್ತೇವೆ” ಎಂದರು. ನಡಿಗೆ ಮೂಲಕ ಹೋಗುತ್ತೀರಾ ಎಂದು ಕೇಳಿದಾಗ, “ಪೊಲೀಸರು ವಾತಾವರಣ ನೋಡಿ ಯಾವ ಸಲಹೆ ನೀಡುತ್ತಾರೋ ಆ ರೀತಿ ಮಾಡುತ್ತೇವೆ. ನಡಿಗೆ ಮೂಲಕ ಆದರೂ ಹೋಗಬಹುದು ಅಥವಾ ವಾಹನದಲ್ಲಿಯಾದರೂ ತೆರಳಬಹುದು” ಎಂದರು.




























































