ಬೆಂಗಳೂರು: ಜಿಎಸ್‌ಟಿ ವಿಚಾರವಾಗಿ ರಾಜ್ಯದಲ್ಲಿ ಉಂಟಾದ ಗೊಂದಲದ ಹಿನ್ನೆಲೆ, ಸಣ್ಣ ಮತ್ತು ಬೀದಿ ವ್ಯಾಪಾರಿಗಳ ಹಿತಾಸಕ್ತಿಯ ರಕ್ಷಣೆಗೆ ಕರ್ನಾಟಕ ಬಿಜೆಪಿ ಸಹಾಯವಾಣಿ ಆರಂಭಿಸಲು ನಿರ್ಧರಿಸಿದ್ದು, ಈ ಸಹಾಯವಾಣಿ ಜುಲೈ 21ರಿಂದ ಕಾರ್ಯನಿರ್ವಹಿಸಲಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
88842 45123 ಈ ನಂಬರಿನಲ್ಲಿ ಲಭ್ಯವಿರುವ ಸಹಾಯವಾಣಿ ಮೂಲಕ ವ್ಯಾಪಾರಿಗಳು ತಮ್ಮ ಸಮಸ್ಯೆಗಳನ್ನು ಹಾಗೂ ಗೊಂದಲಗಳನ್ನು ತಿಳಿಸಬಹುದಾಗಿದೆ.
“ನೋಟಿಸ್‌ಗಳ ಮೂಲಕ ವ್ಯಾಪಾರಿಗಳಿಗೆ ಭಯದ ವಾತಾವರಣ”
ರಾಜ್ಯ ಸರ್ಕಾರ ಬೀದಿ ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್ ಜಾರಿ ಮಾಡಿರುವುದು ಭಯ ಮತ್ತು ಗೊಂದಲ ಉಂಟುಮಾಡಿದೆ ಎಂದು ಆರೋಪಿಸಿದ ನಾರಾಯಣಸ್ವಾಮಿ, “ವ್ಯಾಪಾರಿಗಳು ತೆರಿಗೆ ವಂಚಕರು ಅಲ್ಲ. ಆದರೆ ಅವರು ನಿಯಮಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಈ ಬಗ್ಗೆಯೇ ಸರ್ಕಾರ ಜಾಗೃತಿ ಮೂಡಿಸಬೇಕಿತ್ತು” ಎಂದು ಟೀಕಿಸಿದರು.
ರಾಜ್ಯ ಸರ್ಕಾರ, ತೆರಿಗೆಗೆ ಒಳಪಡುವ ಆದಾಯದ ಪ್ರಮಾಣ ಏನು ಎಂಬುದರ ಬಗ್ಗೆ ಸ್ಪಷ್ಟತೆ ನೀಡದೆ ನೇರವಾಗಿ ನೋಟಿಸ್‌ಗಳನ್ನು ನೀಡಿರುವುದು ಅನ್ಯಾಯವಾಗಿದೆ ಎಂದು ಅವರು ಹೇಳಿದರು.