ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ವಿಷಯವು ಮಾಧ್ಯಮಗಳ ಸೃಷ್ಟಿ ಮತ್ತು ಅಂತಹ ಊಹಾಪೋಹಗಳಿಗೆ ಯಾವುದೇ ಆಧಾರವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ. ‘ಉಪಮುಖ್ಯಮಂತ್ರಿ ಶಿವಕುಮಾರ್ ಮತ್ತು ನಾನು ಸಿಎಂ. ಈ ಹುದ್ದೆಗಳು ಖಾಲಿ ಇಲ್ಲ ಎಂದ ಸಿದ್ದರಾಮಯ್ಯ, ಐದು ವರ್ಷ ನಾನೇ ಸಿಎಂ’ ಎಂದು ಪುನರುಚ್ಚರಿಸಿದ್ದಾರೆ.
ನವದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಯ ಹಸ್ತಾಂತರದ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯದ ಶಾಸಕರೊಂದಿಗೆ ನಡೆಸಿದ ಸಭೆಯ ಉದ್ದೇಶ ನಾಯಕತ್ವ ಬದಲಾವಣೆಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯನ್ನು ಬದಲಾಯಿಸುವ ಯಾವುದೇ ಪ್ರಶ್ನೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸ್ವತಃ ತಳ್ಳಿಹಾಕಿರುವುದರಿಂದ, ಈ ವಿಷಯದ ಬಗ್ಗೆ ಯಾವುದೇ ಊಹಾಪೋಹಗಳಿಗೆ ಅವಕಾಶವಿಲ್ಲ. ಊಹಾಪೋಹವು ಸಂಪೂರ್ಣವಾಗಿ ಮಾಧ್ಯಮ ಪ್ರೇರಿತವಾಗಿದೆ ಮತ್ತು ಕಾಂಗ್ರೆಸ್ ವಲಯದಲ್ಲಿ ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಸರ್ಕಾರ ಎರಡೂವರೆ ವರ್ಷಗಳನ್ನು ಪೂರೈಸಿರುವುದರಿಂದ, ಅಧಿಕಾರ ಹಂಚಿಕೆಯ ಕುರಿತು ಚರ್ಚೆಗಳು ಸಹಜ ಎಂದ ಅವರು, ಅಧಿಕಾರ ವರ್ಗಾವಣೆಗೆ ಸಂಬಂಧಿಸಿದಂತೆ ಯಾವುದೇ ಒಪ್ಪಂದವಿಲ್ಲ ಎಂದರು. ಮುಖ್ಯಮಂತ್ರಿಯನ್ನು ಬದಲಾಯಿಸುವ ಬಗ್ಗೆ ಕೆಲವು ಕಾಂಗ್ರೆಸ್ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಂತಹ ಹೇಳಿಕೆಗಳು ವೈಯಕ್ತಿಕ ಅಭಿಪ್ರಾಯಗಳಾಗಿವೆ ಮತ್ತು ಪಕ್ಷದ ನಿರ್ಧಾರವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದರು. ಸಂಭಾವ್ಯ ಅಧಿಕಾರ ವರ್ಗಾವಣೆಯ ಕುರಿತಾದ ಊಹಾಪೋಹಗಳು ಅರ್ಥಹೀನ ಎಂದು ಅವರು ಹೇಳಿದರು.ಸಚಿವ ಸಂಪುಟ ಪುನರ್ರಚನೆ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.