ಬೆಂಗಳೂರು: ಖ್ಯಾತ ಪತ್ರಕರ್ತ ರವಿ ಬೆಳಗೆರೆ ರಚಿಸಿದ ‘ವೇಷಗಳು’ ಎಂಬ ಸಣ್ಣಕಥೆ ಆಧಾರಿತ ಚಲನಚಿತ್ರ ಈಗ ಬೆಳ್ಳಿತೆರೆಯತ್ತ ಹೆಜ್ಜೆ ಇಡುತ್ತಿದೆ. ಚಿತ್ರವನ್ನಾಧರಿಸಿದ ಟೈಟಲ್ ಟೀಸರ್ ಜುಲೈ 8ರಂದು ನಟ ಶ್ರೀನಗರ ಕಿಟ್ಟಿಯವರ ಹುಟ್ಟಿದ ದಿನದಂದು ಬಿಡುಗಡೆ ಮಾಡಲಾಗಿದೆ.
ಜೋಗತಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಹೊಸ ರೂಪದಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ. ಅವರ ಭಿನ್ನ ಪಾತ್ರರೂಪ, ಭಾವನಾತ್ಮಕ ಅಭಿನಯವು ಟೀಸರ್‌ನಲ್ಲಿಯೇ ಗಮನ ಸೆಳೆಯುವಂತಿದೆ. ಜೋಗತಿ ಸಮುದಾಯದ ನೋವಿನ ಕಥನಕ್ಕೆ ಚಿತ್ರ ರೂಪ ನೀಡಿರುವುದು ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.
‘ಗ್ರೀನ್ ಟ್ರೀ ಸ್ಟುಡಿಯೋಸ್’ ಪ್ರಸ್ತುತಪಡಿಸುತ್ತಿರುವ ಈ ಚಿತ್ರಕ್ಕೆ ಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಕಿಶನ್ ರಾವ್ ದಳವಿ ನಿರ್ವಹಿಸುತ್ತಿದ್ದಾರೆ. ಸಮಾಜದಿಂದ ನಿರಾಕೃತರಾಗಿರುವ ಜೋಗತಿಯರ ಅಸ್ತಿತ್ವ, ಬದುಕಿನ ನೋವು ಹಾಗೂ ಬಂಡಾಯವನ್ನು ತೆರೆ ಮೇಲೆ ತಂದಾಡುವ ಪ್ರಯತ್ನ ಇದು ಎಂದು ಚಿತ್ರತಂಡದವರು ಹೇಳಿದ್ದಾರೆ.
ಚಿತ್ರದ ಮೊದಲ ನೋಟವೇ ಸಾಮಾಜಿಕ ವಸ್ತುಸ್ಥಿತಿಯ ಬೆಳಕು ಚೆಲ್ಲುವುದರ ಜತೆಗೆ, ಜೋಗತಿ ಸಮುದಾಯದ ಬದುಕಿಗೆ ಮಾನವೀಯ ಸ್ಪರ್ಶ ನೀಡುವ ಭರವಸೆ ಮೂಡಿಸಿದೆ.