ಬೆಂಗಳೂರು: ಮತ್ತೊಮ್ಮೆ ಜಾತಿ ಸಮೀಕ್ಷೆ ನಡೆಸುವ ತೀರ್ಮಾನದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕಪಾಳಮೋಕ್ಷ ಮಾಡಿದೆ. ಇದು ಸಿಎಂ ಸಿದ್ದರಾಮಯ್ಯನವರ ಸೋಲು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗೆಲುವು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರು ಜಾತಿ ಸಮೀಕ್ಷೆಯಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖಭಂಗವಾಗಿ ಸೋಲಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಗೆಲುವಾಗಿದೆ. ಈ ವರದಿಯನ್ನು ನಾವೆಲ್ಲರೂ ವಿರೋಧಿಸಿದ್ದೆವು. ಕಾಂಗ್ರೆಸ್ ಹೈಕಮಾಂಡ್ ಗೆ ಈ ವರದಿ ಸರಿಯಿಲ್ಲ ಎನ್ನಿಸಿದೆ. ಹೈಕಮಾಂಡ್ ನಿಂದ ಸಿದ್ದರಾಮಯ್ಯನವರಿಗೆ ಕಪಾಳಮೋಕ್ಷವಾಗಿದೆ. ಯಾರು ಏನೇ ಮಾಡಿದರೂ ವರದಿ ಜಾರಿ ಮಾಡುತ್ತೇನೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರು ಹೇಳಿದಂತೆ ನಡೆದುಕೊಳ್ಳದೇ ಇರುವುದರಿಂದ ರಾಜೀನಾಮೆ ಕೊಡುವುದು ಸೂಕ್ತ. 160 ಕೋಟಿ ರೂ. ವ್ಯರ್ಥವಾಗಿದ್ದು, ಮರು ಸಮೀಕ್ಷೆ ನಡೆಸಲು ಇವರ ಬಳಿ ಹಣವಿಲ್ಲ. ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಹೈಕಮಾಂಡ್ ಶಂಖದಿಂದ ಬಂದರೆ ಮಾತ್ರ ತೀರ್ಥವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಈ ಹಿಂದೆ ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ ಎಂದು ಸಾರ್ವಜನಿಕರು, ಮಠಾಧೀಶರು, ಸಮುದಾಯಗಳ ಮುಖಂಡರು, ಸ್ವತಃ ಕಾಂಗ್ರೆಸ್ ಪಕ್ಷದ ಅನೇಕ ಸಚಿವರು, ಶಾಸಕರು ವಿರೋಧ ಮಾಡುತ್ತಿದ್ದರೂ, ಅದನ್ನು ಬಲವಾಗಿ ಸಮರ್ಥಿಸಿಕೊಂಡು, ಸಚಿವ ಸಂಪುಟದ ಮುಂದೆ ತರಲು ಸಿಎಂ ಸಿದ್ದರಾಮಯ್ಯ ಇಷ್ಟೆಲ್ಲಾ ಹಠ ಹಿಡಿದಿದ್ದರು. ಆದರೆ ಹೈಕಮಾಂಡ್ ತಪರಾಕಿ ಹಾಕಿದಾಕ್ಷಣ, ಮರು ಸಮೀಕ್ಷೆ ಮಾಡುವ ತೀರ್ಮಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಇದರಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ. ಇವರಿಗೆ ರಾಜ್ಯದ ಜನರ ಮೇಲೆ, ಮಠಾಧೀಶರು, ಸಮುದಾಯಗಳ ಮುಖಂಡರ ಮೇಲೆ ವಿಶ್ವಾಸವಿಲ್ಲ. ಇವರು ಏನಿದ್ದರೂ ಹೈಕಮಾಂಡ್ ವಾಕ್ಯ ಪರಿಪಾಲಕ ಅಲ್ಲವೇ? ಎಂದವರು ಪ್ರಶ್ನಿಸಿದ್ದಾರೆ.
ಸಮೀಕ್ಷೆ ನಡೆಸುವವರು ಯಾರು? ಎಂದೂ ಅವರು ಪ್ರಶ್ನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರು 90 ದಿನಗಳ ಕಾಲಮಿತಿಯಲ್ಲಿ ಸಮೀಕ್ಷೆ ನಡೆಸುವ ಬಗ್ಗೆ ಹಲವು ಗಂಭೀರ ಪ್ರಶ್ನೆಗಳು ಎದುರಾಗಿವೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಸಮೀಕ್ಷೆ ಹೇಗೆ ಸಾಧ್ಯ ಎಂಬುದು ಜನಸಾಮಾನ್ಯರ ಆತಂಕವಾಗಿದೆ. ಶಾಲೆಗಳು ಈಗಾಗಲೇ ಆರಂಭವಾಗಿವೆ. ಇಂತಹ ಸಮಯದಲ್ಲಿ ಸಮೀಕ್ಷೆಯಂತಹ ಬೃಹತ್ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿದರೆ, ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಬುಡಮೇಲಾಗುತ್ತವೆ. ಮಕ್ಕಳ ಭವಿಷ್ಯದ ಮೇಲೆ ಇದು ನೇರ ಪರಿಣಾಮ ಬೀರಲಿದೆ. ಹಾಗಾದರೆ, ಈ 90 ದಿನಗಳಲ್ಲಿ ಸಮೀಕ್ಷೆಯನ್ನು ನಡೆಸಲು ಸರ್ಕಾರ ಯಾರನ್ನು ನಿಯೋಜಿಸಲಿದೆ? ಎಂದು ಅವರು ಸಿಎಂ ಅವರನ್ನು ಕೇಳಿದ್ದಾರೆ.
ಆನ್‌ಲೈನ್ ಮೂಲಕ ಸಮೀಕ್ಷೆ ನಡೆಸುವ ಚಿಂತನೆ ಮತ್ತೊಂದು ಅವಿವೇಕದ ಕ್ರಮವೆಂದು ತೋರುತ್ತಿದೆ. ಅನೇಕ ಅಕ್ಷರಸ್ಥರೇ ಇಂದಿಗೂ ಆನ್‌ಲೈನ್ ವ್ಯವಸ್ಥೆಯಿಂದ ದೂರ ಇರುವಾಗ, ಇಂತಹ ಸಮೀಕ್ಷೆ ಹೇಗೆ ಸಾಧ್ಯ? ಇದರಿಂದ ಮಾಹಿತಿಯ ನಿಖರತೆ ಮತ್ತು ಗುರುತು ಪತ್ತೆ ಹೇಗೆ ಸಾಧ್ಯವಾಗುತ್ತದೆ? ತಪ್ಪು ದಾಖಲಾತಿಗಳನ್ನು ತಡೆಯಲು ಸರ್ಕಾರ ಏನು ಕ್ರಮ ತೆಗೆದುಕೊಳ್ಳಲಿದೆ? ಎಂದು ಪ್ರಶ್ನಿಸಿರುವ ಅಶೋಕ್, ಜಾತಿ ಜನಗಣತಿಗಾಗಿ ಈಗಾಗಲೇ ಖರ್ಚಾದ ಈ ಬೃಹತ್ ಮೊತ್ತಕ್ಕೆ ಯಾರು ಹೊಣೆಗಾರರು? ಈ ಹಿಂದೆ ಸಿದ್ಧಪಡಿಸಿದ್ದ ಕಾಂತರಾಜು-ಜಯಪ್ರಕಾಶ್ ಹೆಗ್ಡೆ ಅವರ ‘ಚೌಚೌ ವರದಿ’ಗೆ ಈಗ ಎಳ್ಳು-ನೀರು ಬಿಟ್ಟಂತಾಗಿದೆ. ಆ ವರದಿಗೆ ತೆರಿಗೆದಾರರ 167 ಕೋಟಿ ರೂ. ವೆಚ್ಚವಾಗಿದೆ. ಈ ಹಣವನ್ನು ಯಾರಿಂದ ವಸೂಲಿ ಮಾಡುತ್ತಾರೆ? ಐಪಿಎಲ್ ವಿಜಯೋತ್ಸವ ದುರಂತ ಮರೆಮಾಚಲು ಬೃಹತ್ ನಾಟಕವೇ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.
ಸರ್ಕಾರಕ್ಕೆ ನಿಜಕ್ಕೂ ಬದ್ಧತೆ ಮತ್ತು ಪ್ರಾಮಾಣಿಕತೆ ಇದ್ದರೆ, ಸಮೀಕ್ಷೆ ಹೇಗಿರಬೇಕು ಎಂಬ ಬಗ್ಗೆ ಮೊದಲು ಸಾರ್ವಜನಿಕ ಚರ್ಚೆ ನಡೆಸಬೇಕು. ಹಾಗೆಯೇ, ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿ, ಎಲ್ಲರ ಅಭಿಪ್ರಾಯಗಳನ್ನು ಆಲಿಸಬೇಕು. ಸಮಗ್ರವಾಗಿ ಎಲ್ಲ ಸಿದ್ಧತೆಗಳನ್ನು ಮುಗಿಸಿ, ಈ ಶೈಕ್ಷಣಿಕ ವರ್ಷ ಮುಗಿದ ಬಳಿಕವಷ್ಟೇ ಶಿಕ್ಷಕರನ್ನು ಬಳಸಿಕೊಂಡು ಸಮೀಕ್ಷೆ ನಡೆಸಬೇಕು. ಇದು ರಾಜ್ಯದ ಹಿತದೃಷ್ಟಿಯಿಂದ ಅತಿ ಅವಶ್ಯಕ ಎಂದು ಆರ್.ಅಶೋಕ ಅವರು ಸರ್ಕಾರದ ಕಿವಿಹಿಂಡಿದ್ದಾರೆ.


























































