ಬೆಂಗಳೂರು: ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ಸಿನ ಹಿನ್ನೆಲೆ ಬಿಜೆಪಿ ದೇಶಾದ್ಯಂತ ತಿರಂಗಾ ಯಾತ್ರೆ ಹಮ್ಮಿಕೊಂಡಿದೆ. ಈ ಯಾತ್ರೆಯಲ್ಲಿ ಬಿಜೆಪಿ ಧ್ವಜ ಪ್ರದರ್ಶನ ಇರಲ್ಲ.
ತಿರಂಗಾ ಯಾತ್ರೆ ಕುರಿತು ಮಾಹಿತಿ ಒದಗಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ, ಯುದ್ಧ ಆರಂಭವಾಗುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಯೋಧರ ಜೊತೆ ನಾವೆಲ್ಲರೂ ಇದ್ದೇವೆ ಎಂದು ಹೇಳುವುದು ಪ್ರತಿ ಭಾರತೀಯರ ಕರ್ತವ್ಯ. ಅದಕ್ಕಾಗಿ ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ ನಡೆಯಲಿದೆ. ಮೇ 15 ರಂದು ರಾಜಧಾನಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಯಾತ್ರೆ ನಡೆಯಲಿದೆ ಎಂದರು.
ಬೆಂಗಳೂರಿನಲ್ಲಿ ಮಲ್ಲೇಶ್ವರದ ಸಂಪಿಗೆಯ ರಸ್ತೆಯಲ್ಲಿ ಶಿರೂರು ಪಾರ್ಕ್‌ನಿಂದ 18 ನೇ ಕ್ರಾಸ್‌ವರೆಗೆ ತಿರಂಗಾ ಯಾತ್ರೆ ನಡೆಯಲಿದೆ. ಇದರಲ್ಲಿ ಪಕ್ಷದ ಚಿಹ್ನೆ ಇರುವುದಿಲ್ಲ. ರಾಷ್ಟ್ರಧ್ವಜ ಇರಲಿದೆ ಎಂದು ತಿಳಿಸಿದರು.
ಮೇ 16 ಮತ್ತು 17 ರಂದು ಜಿಲ್ಲಾ ಕೇಂದ್ರದಲ್ಲಿ, ಮೇ 18 ರಿಂದ 23 ರವರೆಗೆ ತಾಲೂಕು ಕೇಂದ್ರಗಳಲ್ಲಿ ಯಾತ್ರೆ ಮಾಡಲಾಗುವುದು. ಇದರಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಭಾರತೀಯ ಮಹಿಳೆಯರ ಸಿಂದೂರ ಮುಟ್ಟಿದರೆ ಏನಾಗುತ್ತದೆ ಎಂಬುದನ್ನು ಭಾರತೀಯ ಸೇನೆ ತೋರಿಸಿದೆ. 100 ಕ್ಕೂ ಅಧಿಕ ಉಗ್ರರು ಸತ್ತಿದ್ದಾರೆ. ತರಬೇತಿ ಕೇಂದ್ರಗಳು ನಾಶವಾಗಿದೆ. ಯುದ್ಧ ಕೈ ಬಿಡಿ ಎಂದು ಅಂಗಲಾಚುವ ಮಟ್ಟಕ್ಕೆ ಪಾಕಿಸ್ತಾನ ಬಂದಿದೆ ಎಂದರು.