ಮಂಗಳೂರು: ‘ಕಟೀಲು’ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಉರಾದರೂ ಇಲ್ಲಿನ ದೇಗುಲವು ಜಗದಗಲ ಖ್ಯಾತಿಯನ್ನು ಹೊಂದಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರವು ಕರಾವಳಿಯ ಪ್ರಸಿದ್ಧ ದೇಗುಲವಾಗಿದ್ದು, ದೇಶ-ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಮಂಗಳೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ನಂದಿನಿ ನದಿಯ ಮಧ್ಯೆ ಇದ್ದು, ಹಚ್ಚ ಹಸಿರಿನ ವನಸಿರಿಯ ಸಿಂಗಾರದಿಂದಾಗಿ ಪ್ರವಾಸಿಗರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ನಿತ್ಯವೂ ಭಕ್ತಸಾಗರದಿಂದ ತುಂಬಿ ತುಳುಕುತ್ತಿರುವ ಕಟೀಲು ದೇಗುಲವು ಮುಜರಾಯಿ ಇಲಾಖೆಗೊಳಪಟ್ಟ ಶ್ರೀಮಂತ ದೇಗುಲಗಳಲ್ಲೊಂದು.
ಇದೀಗ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ವಾರ್ಷಿಕ ಅದ್ಧೂರಿ ಜಾತ್ರೆಗೆ ಸಾಕ್ಷಿಯಾಗುತ್ತಿದೆ. ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ 8 ದಿನಗಳ ಕಾಲ ಈ ವೈಭವ ನೆರವೇರುತ್ತದೆ. ವೈಶಿಷ್ಟ್ಯಗಳೊಂದಿಗೆ ಮೊದಲ ದಿನ ಕೋಡಿ (ಧ್ವಜ) ಏರಿಸುವ ಮೂಲಕ ಜಾತ್ರೆ ಆರಂಭವಾಗುತ್ತದೆ.
- 3ನೇ ದಿನ ದೇವರ ಮೂಡು ಸವಾರಿ (ಮೂಡಣದ ದಿಕ್ಕಿಗೆ) ನಡೆಯುತ್ತದೆ.
- 5ನೇ ದಿನ ರಥಬೀದಿಯಲ್ಲಿ ಬೆಳ್ಳಿ ರಥೋತ್ಸವ ನಡೆಯುತ್ತದೆ.
- 6ನೇ ದಿನ ಪಡು ಸವಾರಿ ( ಪಡುವಣದ ದಿಕ್ಕಿಗೆ) ನಡೆಯುತ್ತದೆ.
- 7ನೇ ದಿನ ಬ್ರಹ್ಮರಥೋತ್ಸವ ನಡೆಯುತ್ತದೆ.
- ಕೊನೆಯ ದಿನ ದೇವರ ಕಟೀಲು ಊರ ಸವಾರಿ ನಡೆಯುತ್ತದೆ.
ಉತ್ಸವ ಸವಾರಿ ಎಂದರೆ ಊರಿಗೆ ಊರೇ ಹಬ್ಬದ ಸಡಗರ ಆವರಿಸುತ್ತದೆ. ಮರಳಿ ರಥಬೀದಿಗೆ ಬರುವಾಗ ಮಧ್ಯರಾತ್ರಿ ಸುಮಾರು 2 ಗಂಟೆ ಆಗುತ್ತದೆ. ಅದೇ ಸಮಯಕ್ಕೆ ಶಿಬರೂರಿನ ಕೊಡಮಣಿತ್ತಾಯ ದೈವದ ಪ್ರವೇಶವೂ ಆಗಿರುವುದು ಕಟೀಲು ಕ್ಷೇತ್ರದ್ದೇ ಆದ ವಿಶೇಷತೆ. ಅನಂತರ ರಥೋತ್ಸವ (ಅವಭೃಥೋತ್ಸವ) ನಡೆಯುತ್ತದೆ. ಬಳಿಕ ದೇವರು ಜಳಕಕ್ಕೆ ಹೋಗಿ ಅಲ್ಲಿಂದ ಮರಳಿ ಬರುವಾಗ ತೂಟೆ ದಾಟ (ಬೆಂಕಿಯ ಆಟ) ನೆರವೇರುತ್ತದೆ. ಹಿಂದಿನ ಕಾಲದಲ್ಲಿ ಕೊಡೆತ್ತೂರು ಮತ್ತು ಅತ್ತೂರು ಗ್ರಾಮದ ಜನತೆಯ ನಡುವೆ ಜಗಳವಾಗುತ್ತಿದ್ದರಿಂದ, ಅವರ ಕೋಪವನ್ನು ದೇವರ ಮುಂದೆಯೇ ನಿವಾರಣೆಯಾಗಲು ಈ ಆಚರಣೆಯನ್ನು ಅನುಸರಿಸಲಾಯಿತು ಎಂಬುದು ನಂಬಿಕೆ. ಈ ಆಚರಣೆ ಇಂದಿಗೂ ಜಾತ್ರಾ ಮಹೋತ್ಸವದ ಒಂದು ಭಾಗವಾಗಿ ಆಚರಿಸಲ್ಪಡುತ್ತದೆ. ಉತ್ಸವದ ಎಲ್ಲಾ ದಿನಗಳಲ್ಲಿ ಚಿನ್ನದ ರಥೋತ್ಸವ ನಡೆಯುವುದೂ ಒಂದು ಆಕರ್ಷಣೆ.
‘ನವರಾತ್ರಿ’ ವೈಭವ:
ವಾರ್ಷಿಕ ಜಾತ್ರೆಯಷ್ಟೇ ಅಲ್ಲದೆ, ನವರಾತ್ರಿ ವೈಭವವೂ ಗಮನಾರ್ಹ. ಪವಿತ್ರ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಉತ್ಸವದ ಅಂಗವಾಗಿ ‘ಲಲಿತ ಪಂಚಮಿ’, ‘ಮಹಾನವಮಿ’, ‘ವಿಜಯದಶಮಿ’ ಹಾಗೂ ‘ಮಧ್ವ ಜಯಂತಿ’ ಕೈಂಕರ್ಯಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸುತ್ತಾರೆ.
ಲಕ್ಷದೀಪೋತ್ಸವ:
ನವರಾತ್ರಿ ನಂತರ ಕಾರ್ತಿಕ ಮಾಸದ ಬಹುಲಾ ಪಂಚಮಿಯಂದು ದೀಪಗಳ ಹಬ್ಬ ಈ ದೇಗುಲದ ಆಕರ್ಷಣೆಯನ್ನು ನೂರ್ಮಡಿಗೊಳಿಸುತ್ತದೆ.
ಅನ್ನದಾನ, ವಿದ್ಯಾದಾನ
ಅನ್ನದಾನ ಸೇವೆ, ವಿದ್ಯಾದಾನ ಸೇವೆಯಲ್ಲೂ ಕಟೀಲು ರಾಜ್ಯದ ಗಮನಸೆಳೆದಿದೆ. ಕಟೀಲು ದೇವಾಲಯವು ಐದು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ಹಿರಿಯ ಪ್ರಾಥಮಿಕ ಪ್ರೌಢಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಇದ್ದು ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗಿ ದೇಗುಲದ ಅನ್ನಪ್ರಸಾದವೂ ಸಿಗುತ್ತಿದೆ.