ಬೆಂಗಳೂರು: ರಾಜ್ಯದಲ್ಲಿ ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಪ್ರಸ್ತಾಪವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ ಆರಂಭಿಸಲಾಗಿರುವ 9 ವಿಶ್ವವಿದ್ಯಾಲಯಗಳನ್ನು ಮುಚ್ಚವ ಬಗ್ಗೆ ಕೆಲ ಸಮಯದ ಹಿಂದೆ ಡಿಕೆಶಿ ನೀಡಿದ್ದ ಹೇಳಿಕೆಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ.
ವಿಪಕ್ಷ ನಾಯಕ ಆರ್ ಅಶೋಕ್ ಅವರು ವಿಧಾನಸಭೆಯಲ್ಲಿ ಗುರುವಾರ ಈ ವಿಷಯವನ್ನು ಪ್ರಸ್ತಾಪಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಅಶೋಕ್, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಈ ಕುರಿತಂತೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ವಿಶ್ವವಿದ್ಯಾಲಯಗಳನ್ನು ಬೇರೆ ವಿವಿಗಳ ಜತೆ ವಿಲೀನ ಮಾಡುತ್ತಿದ್ದೇವೆ ಯೇ ಹೊರತು, ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಸರ್ಟಿಫಿಕೇಟ್ ತೆಗೆದುಕೊಳ್ಳುವುದಕ್ಕೂ ಚಾಮರಾಜನಗರ ಅಥವಾ ಮಂಡ್ಯ ವಿವಿಯಲ್ಲಿ ತೆಗೆದುಕೊಳ್ಳುವುದಕ್ಕೂ ವ್ಯತ್ಯಾಸ ಇದೆ ಎಂದ ಅವರು, ಈ ವಿಶ್ವವಿದ್ಯಾಲಯಗಳನ್ನು ಬೇರೆ ವಿವಿಗಳ ಜತೆ ವಿಲೀನ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.