ಮನಮೋಹನ್ ಸಿಂಗ್ ನಿಧನ ಹಿನ್ನೆಲೆ; ರಾಜ್ಯದಲ್ಲಿ ಇಂದು ಸರ್ಕಾರಿ ರಜೆ; 7 ದಿನ ಶೋಕಾಚರಣೆ, ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮ ನಿಷೇಧ..
ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ರಾಜ್ಯ ಸರ್ಕಾರವು ಗಾಢ ಸಂತಾಪ ವ್ಯಕ್ತಪಡಿಸಿದೆ. ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಶಿಷ್ಟಾಚಾರ ವಿಭಾಗದ ಉಪಕಾರ್ಯದರ್ಶಿ ಎಲಿಷ ಆಂಡ್ರೂಸ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಮಾಜಿ ಪ್ರಧಾನಿ ಗೌರವಾರ್ಥ 27.12.2024 ರಂದು ಶುಕ್ರವಾರ ರಾಜ್ಯದಾದ್ಯಂತ ಸಾರ್ವಜನಿಕ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳು ಒಳಗೊಂಡಂತೆ ಸಾರ್ವಜನಿಕ ರಜೆ ಘೋಷಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಡಿಸೆಂಬರ್ 26ರಿಂದ ಜನವರಿ 1ರವರೆಗೆ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ನಿಯತವಾಗಿ ಹಾರಿಸಲ್ಪಡುವ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು.
ಈ ನೆಗೋಷಿಯಬಲ್ ಇನ್ಸುಮೆಂಟ್ ಆಕ್ಟ್ 1881 ರ ಪ್ರಕಾರವು ಕೂಡಾ ಸಾರ್ವಜನಿಕ ರಜೆಯೆಂದು ಘೋಷಿಸಲಾಗಿದೆ ಎಂದೂ ಎಲಿಷ ಆಂಡ್ರೂಸ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.