ಬೆಂಗಳೂರು: ಕಟ್ಟಡ ಕಲ್ಲು ಗಣಿಗಾರಿಕೆಯ ಮೇಲಿನ ರಾಯಧನವನ್ನು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಪ್ರತಿ ಮೆಟ್ರಿಕ್ ಟನ್‌ಗೆ 70 ರೂಪಾಯಿಯಿಂದ 80 ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ತಿಳಿಸಿದ್ದಾರೆ.
ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ವಿವರ ಒದಗಿಸಿದ ಸಚಿವ ಎಚ್‌ಕೆ ಪಾಟೀಲ್, ಪ್ರತಿ ಮೆಟ್ರಿಕ್ ಟನ್ ಕಟ್ಟಡ ಕಲ್ಲುಗಳಿಗೆ ರಾಯಧನವನ್ನು 70 ರೂ.ನಿಂದ 80 ರೂ.ಗೆ ಹೆಚ್ಚಿಸಲಾಗಿದೆ ಎಂದರು. ಈ ಕ್ರಮದಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 311.55 ಕೋಟಿ ಹೆಚ್ಚುವರಿ ಆದಾಯ ಬರುವ ನಿರೀಕ್ಷೆ ಇದೆ ಎಂದರು.
ಇದೇ ವೇಳೆ, ರಾಯಧನ ಪಾವತಿಸದೆ ಖನಿಜ ಸಾಗಣೆ ಮಾಡಿದರೆ ದಂಡ ವಸೂಲಿಗೆ ನಿರ್ಧರಿಸಲಾಗಿದೆ ಎಂದು ಸಚಿವ ಎಚ್‌ಕೆ ಪಾಟೀಲ್ ವಿವರಿಸಿದರ.