ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಾ ಹೋರಾಟದ ನಾಟಕವಾಡುತ್ತಿರುವ ಬಿಜೆಪಿ ನಾಯಕರಾದ ಆರ್.ಅಶೋಕ್ ಹಾಗೂ ಡಾ.ಸುಧಾಕರ್ ಅವರು ಮೊದಲು ತಮ್ಮ ವಿರುದ್ಧವೇ ಇರುವ ಆರೋಪಗಳಿಗೆ ಉತ್ತರಿಸಲಿ ಎಂದು KPCC ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಸಂಸದ ಸುಧಾಕರ್ ಅವರನ್ನು ‘ಭಲೇ ಜೋಡಿ’ ಎಂದು ಕರೆದಿರುವ ರಮೇಶ್ ಬಾಬು, ಸರ್ಕಾರದ ವಿರುದ್ಧದ ಹೋರಾಟ ನಡೆಸುವ ತಾವು ಮೊದಲು ಕಾಂಗ್ರೆಸ್ ಪಕ್ಷದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ರಮೇಶ್ ಬಾಬು, 10 ಪ್ರಶ್ನೆಗಳನ್ನು ಅಶೋಕ್ ಹಾಗೂ ಸುಧಾಕರ್ ಅವರ ಮುಂದಿಟ್ಟಿದ್ದಾರೆ. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಶೋಕ್ ರವರು ಕರ್ನಾಟಕದ ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಸುಧಾಕರ್ ಅವರ ಜೊತೆಯಲ್ಲಿ ಈ ದಿನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಭಲೇ ಜೋಡಿಯ ರೂಪದಲ್ಲಿ ಇಬ್ಬರು ಪ್ರತಿಭಟನೆಯ ನಾಯಕತ್ವ ವಹಿಸಿಕೊಂಡು ರಾಜ್ಯದ ಜನತೆಗೆ ಮನರಂಜನೆಯನ್ನು ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕದ ಭಾರತೀಯ ಜನತಾ ಪಕ್ಷದಲ್ಲಿ ಇರುವಂತಹ ಗುಂಪುಗಾರಿಕೆಯ ಲಾಭವನ್ನು ಪಡೆದುಕೊಂಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಬಾಚಿಕೊಂಡಿರುವ ಅಶೋಕ್, ಆ ಸ್ಥಾನವನ್ನು ನಿರ್ವಹಿಸಲು ವಿಫಲರಾಗಿದ್ದಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಪದೇಪದೇ ಅನವಶ್ಯಕವಾಗಿ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುವ ಇವರು ತಮ್ಮ ಮೇಲಿರುವಂತಹ ಗುರುತರವಾದ ಆರೋಪಗಳಿಗೆ ಸಾರ್ವಜನಿಕವಾಗಿ ಇದುವರೆಗೆ ಉತ್ತರವನ್ನು ಕೊಟ್ಟಿಲ್ಲ. ಪಲಾಯನವಾದವನ್ನು ತಮ್ಮ ಧ್ಯೇಯ ವಾಕ್ಯ ಮಾಡಿಕೊಂಡಿರುವ ಆರ್.ಅಶೋಕ್, ತಾವೇ ಹಲವಾರು ಆರೋಪಗಳನ್ನು ಮೈತುಂಬಿಸಿಕೊಂಡಿದ್ದು, ಸಾರ್ವಜನಿಕವಾಗಿ ಉತ್ತರ ಕೊಡುವ ಶಕ್ತಿಯನ್ನು ಕಳೆದುಕೊಂಡು ಸರ್ಕಾರವನ್ನು ಟೀಕಿಸುವಂತಹ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಇಂತಹ ಅಸಮರ್ಥ ವಿಪಕ್ಷ ನಾಯಕರು ಕಾಂಗ್ರೆಸ್ ಮೇಲೆ ಟೀಕೆ ಮಾಡುವುದು ಹಾಸ್ಯಾಸ್ಪದ ಎಂದು ರಮೇಶ್ ಬಾಬು ಎದಿರೇಟು ನೀಡಿದ್ದಾರೆ.
ಬಿಜೆಪಿಯ ಗುಂಪುಗಾರಿಕೆಯನ್ನೇ ಅಸ್ತ್ರ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿರುವ ಆರ್.ಅಶೋಕ್ ಮೊದಲು ತಮ್ಮ ವಿರುದ್ಧ ಸ್ವಪಕ್ಷದವರೇ ಮಾಡಿರು ಆರೋಪಗಳಿಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದ ರಮೇಶ್ ಬಾಬು, ಕರ್ನಾಟಕದ ವಿಧಾನಸಭೆಗೆ ತನ್ನದೇ ಆದಂತಹ ಹಿರಿಮೆ ಇದೆ. ಆ ಹಿರಿಮೆಯನ್ನು ಸಂರಕ್ಷಣೆ ಮಾಡುವಲ್ಲಿ, ಗೌರವವನ್ನು ಕಾಪಾಡುವಲ್ಲಿ ವಿಫಲರಾಗಿರುವ ಒಬ್ಬ ಅಸಮರ್ಥ ವಿರೋಧ ಪಕ್ಷದ ನಾಯಕರಾಗಿ ಕರ್ನಾಟಕದ ಜನರಿಗೆ ಆರ್. ಅಶೋಕ್ ಕಾಣಿಸುತ್ತಿದ್ದಾರೆ. ಹಗರಣಗಳ ಕಳಂಕಿತರು ಮತ್ತು ಆರೋಪಿತರು ಆಗಿರುವಂತಹ ಅಶೋಕ್ ಮತ್ತು ಸುಧಾಕರ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಈ ಪ್ರಶ್ನೆಗಳಿಗೆ ಅಶೋಕ್ ಮತ್ತು ಸುಧಾಕರ್ ಉತ್ತರ ನೀಡಲಿ ಎಂದು ಹೇಳಿದ್ದಾರೆ.
-
ಕೋವಿಡ್ ಹಗರಣದಲ್ಲಿ ಮೈಕಲ್ ಡಿಕುನ್ಹಾ ಆಯೋಗದ ವರದಿಗೆ ಅನುಗುಣವಾಗಿ ತನಿಖೆಗೆ ಅಥವಾ ಕಾನೂನು ಕ್ರಮಕ್ಕೆ ನೀವು ಸಮ್ಮತಿ ನೀಡುವಿರಾ?
-
ಆರ್. ಅಶೋಕ್ ರವರು ಕರ್ನಾಟಕದ ಪದ್ಮನಾಭನಗರ ಶಾಸಕರಾಗಿ ಪದ್ಮನಾಭನಗರದಲ್ಲಿ ಕೆರೆ ಒತ್ತುವವರಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತನಿಖೆ ಮಾಡಲು ಒತ್ತಾಯ ಮಾಡುವರೇ ?
-
ಆರ್ .ಅಶೋಕ್ ರವರು ಬೆಂಗಳೂರು ದಕ್ಷಿಣ ತಾಲೂಕಿನ ಬಿ.ಎಮ್. ಕಾವಲು ಗ್ರಾಮದ ಬಗರ್ ಹುಕುಂ ಸಾಗುವಳಿಯ 2500 ಎಕರೆಯ ಅಕ್ರಮ ಹಂಚಿಕೆಗೆ ಸಂಬಂಧಪಟ್ಟಂತೆ ತನಿಖೆ ಮಾಡಲು ರಾಜ್ಯ ಸರ್ಕಾರವನ್ನು ಒತ್ತಾಯಿಸುವರೇ ?
-
ಹಿಂದಿನ ಬಿಜೆಪಿ ಸರ್ಕಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೇರಿದ ಅಮೃತ್ ಕಾವಲ್ ಪ್ರದೇಶದಲ್ಲಿ ಸುಮಾರು 1,000 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಿದ್ದು ಇದರ ತನಿಖೆಗೆ ಒತ್ತಾಯಿಸುವರೇ ?
-
ಅಂದಿನ ಕಂದಾಯ ಸಚಿವರಾಗಿ ದೊಡ್ಡಬಳ್ಳಾಪುರದ ನೂರಾರು ಕೋಟಿ ರೂಪಾಯಿ ಮೌಲ್ಯದ ಕಂದಾಯ ಜಮೀನಿನ ಅಕ್ರಮ ಹಂಚಿಕೆಗೆ ಸಂಬಂಧಪಟ್ಟಂತೆ ಸಾರ್ವಜನಿಕ ತನಿಖೆಗೆ ಒತ್ತಾಯಿಸುವರೇ?
-
ಹಿಂದಿನ ಬಿಜೆಪಿ ಸರ್ಕಾರದ ಪಿಎಸ್ಐ ಹಗರಣಗಳ ಮತ್ತು ಕೆಪಿಎಸ್ ಸಿ ಪರೀಕ್ಷಾ ಅಕ್ರಮಗಳ ಮೇಲೆ ತನಿಖೆಗೆ ಒತ್ತಾಯಿಸುವರೇ?
-
7. ಹಿಂದಿನ ಬಿಜೆಪಿ ಸರ್ಕಾರದ ಬಿಟ್ ಕಾಯಿನ್ ಹಗರಣದ ತನಿಖೆಗೆ ಇವರು ಒತ್ತಾಯಿಸುವರೆ?
-
ಆರ್ ಅಶೋಕ್ ರವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೊಟ್ಟೆಗೊಲ್ಲಹಳ್ಳಿ ಭೂಮಿಗೆ ಸಂಬಂಧಪಟ್ಟಂತೆ ಅಕ್ರಮ ಭೂಮಿ ಹಂಚಿಕೆಯ ಸಂಬಂಧ ತನಿಖೆಗೆ ಒತ್ತಾಯಿಸುವರೆ?
-
ಬಿಜೆಪಿ ನಾಯಕರು ಸನ್ಮಾನ್ಯ ಯತ್ನಾಳ್ ರವರು ನೀರಾವರಿ ಇಲಾಖೆಗೆ ಸಂಬಂಧಪಟ್ಟಂತೆ 20,000 ಕೋಟಿ ರೂಪಾಯಿಗಳ ಆರೋಪವನ್ನು ವಿಜಯೇಂದ್ರರವರ ಮೇಲೆ ಮಾಡಿದ್ದು ಇದರ ತನಿಖೆಗೆ ಒತ್ತಾಯಿಸುವರೇ?
-
ಯತ್ನಾಳ್ ರವರು ಈ ಸರ್ಕಾರವನ್ನು ಉರುಳಿಸಲು ಒಂದು ಸಾವಿರ ಕೋಟಿ ರೂಪಾಯಿಗಳ ಹಣವನ್ನು ಶೇಖರಣೆ ಮಾಡಿರುವುದಾಗಿ ವಿಜಯೇಂದ್ರ ಅವರ ಮೇಲೆ ಮಾಡಿರುವ ಆರೋಪವನ್ನು ತನಿಖೆ ಮಾಡಲು ಒತ್ತಾಯಿಸುವರೇ?
ಭಾರತೀಯ ಜನತಾ ಪಕ್ಷದಲ್ಲಿ ಇರುವಂತಹ ಗುಂಪುಗಾರಿಕೆಯನ್ನು ಮುಚ್ಚಿಕೊಳ್ಳಲು ಇವರು ಜಂಟಿಯಾಗಿ ಪ್ರಚಾರಕ್ಕೆ ಹೊರಟಿದ್ದಾರೆ. ಆದರೆ ಇವರ ಜಂಟಿ ಅಕ್ರಮಗಳ ಕುರಿತು ಸಾರ್ವಜನಿಕವಾಗಿ ಉತ್ತರ ನೀಡಲು ಇಬ್ಬರು ನಾಯಕರು ಹೊಣೆಗಾರಿಕೆಯನ್ನು ಹೊಂದಿದ್ದು ಸಾರ್ವಜನಿಕ ಹಿತಾಸಕ್ತಿಯಿಂದ ರಾಜ್ಯದ ಹಿತಾಸಕ್ತಿಯಿಂದ ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಉತ್ತರ ನೀಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ. ಆರ್ .ಅಶೋಕ್ ಮೇಲೆ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವಂತಹ ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ಚುನಾವಣಾ ಪ್ರಮಾಣ ಪತ್ರದಲ್ಲಿ ಮುಚ್ಚಿಟ್ಟಿರುತ್ತಾರೆ. ಕೇವಲ ಪ್ರಚಾರಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಮುಖ್ಯಮಂತ್ರಿಗಳ ವಿರುದ್ಧ ಆರೋಪಗಳನ್ನು ಮಾಡುವ ಬದಲು ಅವರು ತಮ್ಮ ಆತ್ಮ ಶುದ್ಧೀಕರಣ ಮಾಡಿಕೊಳ್ಳಲು ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆ ಸ್ಥಾನದ ಹಿರಿಮೆಯನ್ನು ಕಾಪಾಡಿಕೊಳ್ಳಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಒತ್ತಾಯಿಸುತ್ತದೆ ಎಂದು ರಮೇಶ್ ಬಾಬು ಹೇಳಿದ್ದಾರೆ.