ಬೆಂಗಳೂರು: ರಾಮನಗರ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಎಂದು ನಾಮಕರಣ ಮಾಡುವ ಕಾಂಗ್ರೆಸ್ ನಾಯಕರ ಪ್ರಸ್ತಾಪ ಬಗ್ಗೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ಗೆ ಹೆಸರು ಬದಲಿಸುವ ಹಕ್ಕಿಲ್ಲ ಎಂದು ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ರಾಮನಗರ ಜಿಲ್ಲೆಗೆ ಸ್ಥಳ ಮಹಿಮೆ ಇದೆ. ಈ ಹೆಸರನ್ನು ಕಾಂಗ್ರೆಸ್ ನಾಯಕರು ಇಟ್ಟಿಲ್ಲ ಅಂದ ಮೇಲೆ ಅದನ್ನು ತೆಗೆಯಲು ಅವರಿಗೆ ಯಾವುದೇ ಹಕ್ಕು ಇಲ್ಲ. ಕರ್ನಾಟಕದಲ್ಲಿ ರಾಮ-ಕೃಷ್ಣ ಎಂದಿರುವ ಊರುಗಳ ಹೆಸರುಗಳನ್ನು ಬದಲಾಯಿಸುತ್ತಾರಾ? ಎಂದು ಪ್ರಶ್ನಿಸಿದರು.
ಶೋಲೆ ಸಿನಿಮಾ ಚಿತ್ರೀಕರಣವಾದಾಗಲೂ ಅಲ್ಲಿ ರಾಮಗಢ ಎಂಬ ಹೆಸರನ್ನೇ ಇಟ್ಟಿದ್ದರು. ಹೆಸರು ಬದಲಾಯಿಸುವ ಬದಲು ಬೆಂಗಳೂರು ನಗರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿ. ರಾಮನ ಮೇಲೆ ದ್ವೇಷ ಇದ್ದರೆ ಬೇರೆ ದಾರಿ ನೋಡಿಕೊಳ್ಳಲಿ. ಆಯಾಯ ಜಿಲ್ಲೆಗೆ ಅದರದ್ದೇ ಆದ ಘನತೆ ಇದೆ. ಹುಚ್ಚರಂತೆ, ತುಘಲಕ್‌ರಂತೆ ಎಲ್ಲವನ್ನೂ ಬೆಂಗಳೂರಿಗೆ ಸೇರಿಸಬಾರದು ಎಂದು ಅಶೋಕ್ ಎಚ್ಚರಿಕೆ ನೀಡಿದರು.

























































