ಮಂಡ್ಯ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಒತ್ತಾಯದ ಬಗ್ಗೆ ಸಂಸತ್ ದಲ್ಲಿ ಖಾಸಗಿ ಮಸೂದೆ ಮಂಡಿಸಲು ಮಂಡ್ಯ ಸಂಸದ ಎಚ್ ಡಿ ಕುಮಾರಸ್ವಾಮಿಯವರ ಕಚೇರಿಗೆ ಸಂಯುಕ್ತ ಕಿಸಾನ್ ಮೋರ್ಚಾ ನಿಯೋಗ ಮನವಿ ಪತ್ರ ಸಲ್ಲಿಸಿದರು. ಸಚಿವ ಕುಮಾರಸ್ವಾಮಿ ಅವರು ಕಚೇರಿಯಲ್ಲಿರಲಿಲ್ಲ. ಹಾಗಾಗಿ ಅಧಿಕಾರಿಗಳ ಮೂಲಕ ಮನವಿ ತಲುಪಿಸಲಾಯಿತು.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಒದಗಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೀರು ಶಾಂತಕುಮಾರ್, ರೈತ ಸಂಘಟನೆಗಳ ಬೇಡಿಕೆ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಸಚಿವರ ಕಚೇರಿ ಅಧಿಕಾರಿಗಳ ಗಮನಸೆಳೆಯಲಾಯಿತು ಎಂದು ತಿಳಿಸಿದರು.
ದೆಹಲಿಯಲ್ಲಿ ರೈತರು ಕೃಷಿ ಕಾನೂನುಗಳ ವಿರುದ್ಧ ಮತ್ತು ಎಂಎಸ್‌ಪಿ ಗ್ಯಾರಂಟಿ ಕಾನೂನನ್ನು ಜಾರಿಗೆ ತರಲು ಐತಿಹಾಸಿಕ ಚಳವಳಿಯನ್ನು ನಡೆಸಿದ ಪರಿಣಾಮ ಕೇಂದ್ರ ಸರ್ಕಾರ 3 ಕೃಷಿ ಕಾನೂನುಗಳನ್ನು ಹಿಂಪಡೆದು ಎಂಎಸ್‌ಪಿ ಗ್ಯಾರಂಟಿ ಕಾನೂನು ಮಾಡಲು ಸಮಿತಿ ರಚನೆ ಮಾಡುವುದಾಗಿ ಘೋಷಿಸಿತ್ತು. ಎಂಎಸ್‌ಪಿ ಖಾತರಿ ಕಾನೂನನ್ನು ಜಾರಿಗೆ ತರಲು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದೇವೆ, ಆದರೆ ಕೇಂದ್ರ ಸರ್ಕಾರ ಕಿವುಡ ಕಿವಿಗೆ ಬಿದ್ದಿತು. ತಾಳ್ಮೆಯ ಮಿತಿಗಳನ್ನು ದಾಟಿದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಫೆಬ್ರವರಿ 13 ರಂದು “ದೆಹಲಿ ಚಲೋ ರ್ಯಾಲಿ ಘೋಷಿಸಿದೆವು
ಇಡೀ ದೇಶದ ರೈತರಿಗೆ ಎಂಎಸ್‌ಪಿ ದರದಲ್ಲಿ ಎಲ್ಲಾ ಬೆಳೆಗಳನ್ನು ಖರೀದಿಸಲು ಖಾತರಿ ಕಾನೂನು ರೂಪಿಸಬೇಕು ಮತ್ತು ಡಾ.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಲೆಗಳನ್ನ ನಿಗದಿಪಡಿಸಬೇಕು. ರೈತರು ಮತ್ತು ಕೂಲಿಕಾರರನ್ನು ಸಂಪೂರ್ಣ ಸಾಲದಿಂದ ಮುಕ್ತಗೊಳಿಸಬೇಕು. ಭಾರತವು ವಿಶ್ವ ವ್ಯಾಪಾರ ಒಪ್ಪಂದ ಸಂಸ್ಥೆಯಿಂದ ಹೊರಬರಬೇಕು ಮತ್ತು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ನಿಷೇಧಿಸಬೇಕು. 60 ವರ್ಷ ತುಂಬಿದ ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಫಸಲ್ ಭೀಮ ಬೆಳೆ ವಿಮಾ ಯೋಜನೆಯಲ್ಲಿ ತಿದ್ದುಪಡಿಗಳನ್ನು ಮಾಡಬೇಕು.
ನಕಲಿ ಬಿತ್ತನೆ ಬೀಜಗಳು, ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ತಯಾರಿಸುವ ಕಂಪನಿಗಳಿಗೆ ಕಠಿಣ ಶಿಕ್ಷೆ ಮತ್ತು ದಂಡವನ್ನು ವಿಧಿಸಲು ನಿಬಂಧನೆಗಳನ್ನು ಮಾಡಬೇಕು ಮತ್ತು ಬೀಜಗಳ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
ಬರ ಅತಿವೃಷ್ಟಿ ಮಳೆ ಹಾನಿ ಪ್ರವಾಹ ಹಾನಿ ಪ್ರಕೃತಿ ವಿಕೋಪ ಪರಿಹಾರ ಎನ್‌ಡಿಆರ್‌ಎಫ್ ಮಾನದಂಡ ತಿದ್ದುಪಡಿ ಮಾಡಬೇಕು ವೈಜ್ಞಾನಿಕವಾಗಿ ಪರಿಹಾರ ನಿಗದಿ ಮಾಡುವಂತಹ ಆಗಬೇಕು.ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಹರಿಯಾಣದಲ್ಲಿ ರೈತರ ಆಂದೋಲನ-2ರ ವೇಳೆ ಗುಂಡು ಹಾರಿಸಿ ರೈತರಿಗೆ ಚಿತ್ರಹಿಂಸೆ ನೀಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಂಬ ಒತ್ತಾಯಗಳ ಹಿನ್ನೆಲೆಯಲ್ಲಿ ಚಳುವಳಿ ನಡೆಸಲಾಗುತ್ತಿದೆ ಎಂದು ಅವರು ಗಮನಸೆಳೆದರು.
ಕೇಂದ್ರ ಸರ್ಕಾರದ ಸಚಿವರ ಜತೆ 4 ಸುತ್ತಿನ ಮಾತುಕತೆ ನಡೆಸಿದರೂ ಆ ಎಲ್ಲ ಮಾತುಕತೆಗಳು ಅತಂತ್ರವಾಗಿಯೇ ಉಳಿದಿವೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಲು ರಾಜಧಾನಿ ದೆಹಲಿಗೆ ಹೊರಟಿದ್ದ ರೈತರ ಮೇಲೆ ಹರಿಯಾಣದ ಬಿಜೆಪಿ ಸರ್ಕಾರ ಗುಂಡು ಹಾರಿಸಿತು, ಪೆಲೆಟ್ ಗನ್ ಮತ್ತು ವಿಷಕಾರಿ ಅನಿಲಗಳನ್ನು ಪ್ರಯೋಗಿಸಿತು. ಹರಿಯಾಣ ಪೊಲೀಸರು ನಡೆಸಿದ ಈ ಹಿಂಸಾಚಾರದಲ್ಲಿ, ಒಬ್ಬ ರೈತ ಶುಭಾಕರನ್ ಸಿಂಗ್ ತಲೆಗೆ ಗುಂಡು ಹಾರಿಸಿ ಹುತಾತ್ಮರಾದರು,5 ರೈತರು ದೃಷ್ಟಿ ಕಳೆದುಕೊಂಡರು ಮತ್ತು 433 ರೈತರು ಗಾಯಗೊಂಡರು. ಆದರೂ ಚಳುವಳಿ ಮುಂದುವರೆದಿದೆ ಎಂದರು.
ಲೋಕಸಭೆ ಚುನಾವಣೆ ಮುನ್ನ ನಿಮ್ಮ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಸೇರಿಸಿತ್ತು. ಈ ಕಾರಣ ರೈತರು ಸಾರ್ವಜನಿಕರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಸದರಾಗಿ ಆಯ್ಕೆ ಮಾಡಿ ಕಳುಹಿಸಿದ್ದಾರೆ, ಆದ್ದರಿಂದ ಎಲ್ಲಾ ವಿಷಯಗಳ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಖಾಸಗಿ ಮಸೂದೆಗಳನ್ನು ಮಂಡಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ರೈತರು ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಖಾಸಗಿ ಮಸೂದೆಗಳನ್ನು ನೀವು ಗಂಭೀರವಾಗಿ ಮಂಡಿಸದಿದ್ದರೆ ನಿಮ್ಮ ಮತ್ತು ಬಿಜೆಪಿಯ ಅಭಿಪ್ರಾಯಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಎಂದು ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ದಕ್ಷಿಣ ಭಾರತ ಸಂಚಾಲಕ ರಾಜ್ಯ ರೈತ ಸಂಘಟನೆಗಳು ಒಕ್ಕೂಟದ ರಾಜ್ಯಾಧ್ಯಕ್ಷ
ಕುರುಬೂರು ಶಾಂತಕುಮಾರ್ ತಿಳಿಸಿದರು
ಮೈಸೂರಿನ ಮೂಡಾ ಹಗರಣದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮಾಜಿ .ಹಾಲಿ.
ಜನಪ್ರತಿನಿಧಿಗಳು ಪಾಲುದಾರರಾಗಿರುವ ಸುಮಾರು 5000 ಕೋಟಿ ರೂಪಾಯಿಗಳ ಹಗರಣವಾಗಿದೆ. ಈ ಬಗ್ಗೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದು ರಾಜ್ಯಪಾಲರಿಗೆ ದಾಖಲಾತಿಗಳನ್ನು ನೀಡಿ ಒತ್ತಾಯಿಸಿದ್ದೇವೆ ಎಂದು ಅವರು ತಿಳಿಸಿದರು.
ಕಬ್ಬಿನ ಉತ್ಪಾದನೆ ಕಡಿಮೆಯಾಗಿ ಸಕ್ಕರೆ ಕಾರ್ಖಾನೆಗಳು ಕಬ್ಬು ಖರೀದಿ ಪೈಪೋಟಿ ನಡೆಸುತ್ತಿದ್ದಾರೆ. ಹೊಸದಾಗಿ ಕಬ್ಬು ಬೆಳೆಯುವ ರೈತರಿಗೆ 8000 ಪ್ರೋತ್ಸಾಹಧನ ನೀಡುತ್ತಿದ್ದಾರೆ. ಕಬ್ಬಿಗೆ ಹೆಚ್ಚು ಬೆಲೆ ನೀಡುವ ಕಾರ್ಖಾನೆಗೆ ಸರಬರಾಜು ಮಾಡಿ ಆತುರ ಪಡಬೇಡಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಂಘಟನೆಯ ಮಂಜುನಾಥ್, ಬಿ ಮಹದೇವಪ್ಪ, ಟೌನ್ ಮಹೇಶ್, ಚೋಟ್ಟನಹಳ್ಳಿ ಶಂಕರೇಗೌಡ,
ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್. ಲಕ್ಷ್ಮಿಪುರ ವೆಂಕಟೇಶ್. ಕಿರಗಸೂರುಶಂಕರ. ಬರಡನಪುರ ನಾಗರಾಜ್. ನೀಲಕಂಠಪ್ಪ ಉಪಸ್ಥಿತರಿದ್ದರು.
ಅತ್ತ ಬೆಳಗಾವಿಯಲ್ಲಿ ಇದೇ ಬೇಡಿಕೆಗಳನ್ನು ಮುಂದಿಟ್ಟು ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ರೈತರ ನಿಯೋಗ ಇಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕ ಜಾರಕಿಹೊಳಿ ಅವರಿಗೆ ಮನವಿ ಪತ್ರ ಸಲ್ಲಿಸಿತು.





















































