ಮಂಗಳೂರು: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ನೆಗ್ಗೇರಿಯಾ ಫೌಲೇರಿ ಹೆಸರಿನ ಅಪರೂಪದ ಸೋಂಕು ಇದಾಗಿದ್ದು, ಅಪಾಯಕಾರಿ ಸೂಕ್ಷ್ಮಾಣು ಜೀವಿಯಿಂದ ಹರಡುವ ಅಮೀಬಾ ಸೋಂಕಾಗಿದೆ. ಕಲುಷಿತ ನೀರಿನ ಮೂಲಕ ಹರಡುತ್ತದೆ ಎನ್ನಲಾಗಿದೆ. ಅಮೀಬಾ ಎಂಬ ಬ್ಯಾಕ್ಟೀರಿಯಾ ಮೂಗಿನ ಮೂಲಕ ಶರೀರ ಸೇರಿ ಮೆದುಳಿನ ಮೇಲೆ ದಾಳಿ ಮಾಡುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಕೇರಳದಲ್ಲಿ ನಾಲ್ಕು ಮಕ್ಕಳು ಅಮೀಬಾ ಸೋಂಕಿಗೆ ಬಲಿಯಾಗಿದ್ದು, ಈ ಅಮೀಬಾ ಸೋಂಕು ಕರ್ನಾಟಕ ಗಡಿ ಭಾಗದ ಜಿಲ್ಲೆಗಳಲ್ಲೂ ಆತಂಕಕ್ಕೆ ಕಾರಣವಾಗಿದೆ. ಸೋಂಕು ಹರಡಬಹುದಾದ ಆತಂಕ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಮೀಬಾ ಸೋಂಕು ಲಕ್ಷಣ ಕಂಡು ಬಂದರೆ ಕೂಡಲೇ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಇಲಾಖೆ ಕರೆ ನೀಡಿದೆ.