ಬೆಂಗಳೂರು: ಸಾರಿಗೆ ಇಲಾಖೆಯ RTO ವಿಭಾಗದಲ್ಲಿ ಪಾರದರ್ಶಕ ಹಾಗೂ ನಿಸ್ಪಕ್ಷಪಾತವಾಗಿ ಯಾವುದೇ ರೀತಿಯ ಮಾನವ ಹಸ್ತಕ್ಷೇಪಕ್ಕೆ ಆಸ್ಪದವಿಲ್ಲದೆ ಸುಮಾರು 8 ವರುಷಗಳ ನಂತರ ಮೋಟಾರು ವಾಹನ ನಿರೀಕ್ಷಕರ ಹುದ್ದೆ ಭರ್ತಿ ಮಾಡಲಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮುಂದಾಳುತ್ವದಲ್ಲಿ ನಡೆದ ನೇಮಕಾತಿ ಪ್ರಕ್ರಿಯೆ ಸಾರಿಗೆ ಇಲಾಖೆಯಲ್ಲಿ ಮತ್ತೊಂದು ಯಶೋಗಾಥೆ ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗವು ಇಲಾಖೆಯ ಮೋಟಾರು ವಾಹನ ನಿರೀಕ್ಷಕರ150 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಆಯ್ಕೆ ಪ್ರಕ್ರಿಯೆಯು ವಿವಿಧ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದ್ದು, 25.08.2021ರಂದು ಉಚ್ಚ ನ್ಯಾಯಾಲಯವು ಅಂತಿಮ ತೀರ್ಪು ಪ್ರಕಟಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು 22.07.2022 ಮತ್ತು 26.10.2023ರಲ್ಲಿ 141 (122 [ಉಳಿಕೆ ಮೂಲ ವೃಂದ] + 19 [ಕಲ್ಯಾಣ ಕರ್ನಾಟಕ ವೃಂದ]) ಅಭ್ಯರ್ಥಿಗಳ ಅಂತಿಮ / ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಈ ಆಯ್ಕೆ ಪಟ್ಟಿಗಳನ್ನು ಎಲ್ಲಾ ಮೂಲ ದಾಖಲಾತಿಗಳ ನೈಜತೆಯ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪರಿಶೀಲಿಸಿ ಒಟ್ಟು 84 ಅಭ್ಯರ್ಥಿಗಳಿಗೆ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ನೇಮಕ ಮಾಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ ನೇಮಕಾತಿ ಆದೇಶ ನೀಡಲಾದ 84 ಮೋಟಾರು ವಾಹನ ನಿರೀಕ್ಷಕರುಗಳಿಗೆ ಇಲಾಖೆಯಲ್ಲಿನ ಕಾರ್ಯಗಳ ಬಗ್ಗೆ ಪರಿಚಯಿಸಲು ಒಂದು ದಿನದ ಕಾರ್ಯಾಗಾರದ ಉದ್ಘಾಟನೆ ಗಮನಸೆಳೆಯಿತು.
ಸಾರಿಗೆ ಇಲಾಖೆಯಲ್ಲಿ ಇನ್ನೂ 202 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳು ಖಾಲಿ ಇದ್ದು, ಆ ಪೈಕಿ 76 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಯೋಗವು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸಿದ್ದು, ಆಯ್ಕೆ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಉಳಿದಂತೆ 110 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.