ಮಂಗಳೂರು: ಡಾಕ್ಟರ್ ಪ್ರಭಾಕರ ಭಟ್ ಹೆಸರು ಕರಾವಳಿಯಲ್ಲಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಚಿರಪರಿಚಿತ. ರಾಷ್ಟ್ರೀಯವಾದಿ ಸಂಘಟನೆಯಲ್ಲಿ ಲಕ್ಷಾಂತರ ಸೇನಾನಿಗಳನ್ನು ರೂಪಿಸಿ ಸಮಾಜಮುಖಿ ಸೇವೆಯಲ್ಲಿ ತೊಡಗುವಂತೆ ಮಾಡಿದವರು ಇವರು. ಹಾಗಾಗಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಡಾ.ಪ್ರಭಾಕರ ಭಟ್ ಅವರು ಗುರುಗಳ ಸ್ಥಾನದಲ್ಲಿದ್ದಾರೆ.
ಜಾತಿ-ಮತ-ಪಂಥ ಎನ್ನದೆ, ರಾಷ್ಟ್ರೀಯವಾದವೇ ತಮ್ಮ ಧರ್ಮ ಎಂಬ ಸಿದ್ದಾಂತದಲ್ಲಿ ರಾಜಿಯಾಗದ ಇವರ ನಿಷ್ಟೂರ ವ್ಯಕ್ತಿತ್ವ ಯುವಜನರಿಗೆ ಮಾರ್ಗದರ್ಶಿ ನಡೆ. ಬಹುಶಃ ಈ ಕಾರಣದಿಂದಲೋ ಏನೋ ಈ ಡಾಕ್ಟರ್ ಅವರಿಗೆ ಉನ್ನತ ಪುರಸ್ಕಾರ ನೀಡಲು ಅನೇಕ ವಿಶ್ವವಿದ್ಯಾಲಯಗಳು ಮುಂದಾಗಿವೆ ಆದರೆ ಯಾವುದೇ ರೀತಿಯ ಪ್ರಶಸ್ತಿಗಳನ್ನು ಸ್ವೀಕರಿಸದೆ ತಮ್ಮದೇ ಆದ ನಿಲುವಿನಿಂದ ಗಮನಸೆಳೆದಿರುವ ಈ ಆರೆಸ್ಸೆಸ್ ದಿಗ್ಗಜ, ಇದೀಗ ಪ್ರತಿಷ್ಠಿತ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯ ಪ್ರಕಟಿಸಿರುವ ಗೌರವ ಡಾಕ್ಟರೇಟನ್ನೂ ನಿರಾಕರಿಸಿದ್ದಾರೆ.
ಸಾಮಾನ್ಯರಲ್ಲಿ ಸಾಮಾನ್ಯನಾಗಿರುವ ನನಗೇಕೆ ಈ ಪುರಸ್ಕಾರ ಎನ್ನುತ್ತಲೇ ಈ ಪ್ರತಿಷ್ಠಿತ ‘ಗೌರವ ಡಾಕ್ಟರೇಟ್’ನ್ನು ನಿರಾಕರಿಸಿ ಡಾ.ಪ್ರಭಾಕರ ಭಟ್ ಅವರು ವಿಶ್ವವಿದ್ಯಾಲಯ ಕುಲಪತಿಗೆ ಪತ್ರ ಬರೆದಿದ್ದಾರೆ.
ಡಾಕ್ಟರ್ ಪತ್ರದ ಹೈಲೈಟ್ಸ್ ಹೀಗಿದೆ.?
‘ತಾವು ದೂರವಾಣಿಯಲ್ಲಿ ಮಾತಾಡಿದ್ದು ಮತ್ತು ತಾವು ಕಳುಹಿಸಿಕೊಟ್ಟಂತಹ ಪತ್ರ ಈ ಎರಡು ನನ್ನನ್ನು ದಿಗ್ದಾಂತನನ್ನಾಗಿಸಿದೆ. ಹಿಂದಿನ ಜಗಮಾನ್ಯ ಪೂಜ್ಯ ಸಾಯಿಬಾಬಾರಿಂದ ಸ್ಥಾಪಿಸಲ್ಪಟ್ಟ ವಿಶ್ವಮಾನ್ಯ ಸಂಸ್ಥೆ ನನ್ನಂತಹ ಸರ್ವಸಾಮಾನ್ಯ ವ್ಯಕ್ತಿಯನ್ನು ಅತ್ಯಂತ ದೊಡ್ಡ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದು, ನನ್ನನ್ನು ನಾನು ಮತ್ತೊಮ್ಮೆ ಆತ್ಮಾವಲೋಕನ ಮಾಡುವಂತೆ ಮಾಡಿದೆ’.
‘ನಾನೊಬ್ಬ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಾಮಾನ್ಯ ಕಾರ್ಯಕರ್ತ, ಸಂಘದ ಅಪೇಕ್ಷೆಯಂತೆಯೇ ಎಲ್ಲಾ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಎಲೆಮರೆ ಕಾಯಿಯಂತೆ ಕರ್ತವ್ಯಗಳನ್ನು ನಿಭಾಯಿಸಬೇಕೆಂದೇ ಸಂಘದ ಅಪೇಕ್ಷೆ. ಆದರೆ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ನನ್ನ ಚಿತ್ರ ಸ್ವಲ್ಪ ಹೊರಮುಖಕ್ಕೆ ಹೋಗಿದೆ. ಇದು ಇನ್ನಷ್ಟು ಹೊರಕ್ಕೆ ಅಂದರೆ ಶಾಲು, ಹೂವು, ಹಾರ, ಪ್ರಶಂಸೆ, ಸನ್ಮಾನ, ಪ್ರಶಸ್ತಿಗಳ ಕಡೆಗೆ ಹೋದಾಗ ಸಂಘ ಕಲಿಸಿದ ‘ಸ್ವಯಂಸೇವಕತ್ವ’ದ ಭಾವ ಕಡಿಮೆ ಆಗುತ್ತಾ ಹೋಗುತ್ತೆ. ನಾನು ಉಳಿದ ಸ್ವಯಂಸೇವಕರಿಗೆ ಮೇಲ್ಪಂಕ್ತಿಯೂ ಆಗೋದಿಲ್ಲ. ಸಂಘದಲ್ಲಿ ಸಾಮಾನ್ಯ ಸ್ವಯಂಸೇವಕನಾಗಿರುವುದೇ ಒಂದು ಭಾಗ್ಯ ಅಂದುಕೊಂಡಿರುತ್ತೇನೆ’.
‘ಈ ಶ್ರೇಷ್ಠ ಪ್ರಶಸ್ತಿಯನ್ನು ಪಡೆಯುವ ಹೆಸರಿನ ಯೋಗ್ಯರ ಪಟ್ಟಿಯಿಂದ ನನ್ನ ಹೆಸರನ್ನು ಬಿಡಬೇಕೆಂದು ವಿನಯಪೂರ್ವಕವಾಗಿ ಪೂಜ್ಯ ಸದ್ಗುರುಗಳಲ್ಲಿ ಬೇಡಿಕೊಳ್ಳುತ್ತೇನೆ’.
‘ಇದು ತಿರಸ್ಕಾರವಲ್ಲ, ಧಿಕ್ಕಾರವಂತೂ ಖಂಡಿತ ಅಲ್ಲ, ಪುರಸ್ಕಾರ ಬೇಡವೆಂದಷ್ಟೇ ಮನವಿ’.
‘ವೈದ್ಯಕೀಯ, ಶೈಕ್ಷಣಿಕ ಕ್ಷೇತ್ರದ ಮೂಲಕ ಸಮಾಜ ಸುಧಾರಣೆಯ ನಿಮ್ಮ ಸೇವೆ ಕನಸಿನಲ್ಲೂ ಕಲ್ಪಿಸಿಕೊಳ್ಳಲು ಅಸಾಧ್ಯ ಅದನ್ನು ಸಾಧ್ಯ ಮಾಡಿದ ಪೂಜ್ಯರಿಗೆ, ದೇವಮೂರ್ತಿಗಳಂತೆ ಎಲ್ಲಾ ಬಂಧುಗಳನ್ನು ಕೆತ್ತಿದ ನಿಮಗೂ ನನ್ನ ಹೃದಯಪೂರ್ವಕ ವಂದನೆಗಳು’
ಮೂಲತಃ ವೈದ್ಯರಾಗಿರುವ ಡಾ.ಪ್ರಭಾಕರ ಭಟ್ ಅವರು ಪ್ರತಿಷ್ಠಿತ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯ ಕುಲಪತಿಗೆ ಬರೆದಿರುವ ಈ ಪತ್ರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಆರೆಸ್ಸೆಸ್‌ನಲ್ಲಿ ಅಖಿಲ ಭಾರತೀಯ ಮಟ್ಟದ ಜವಾಬ್ಧಾರಿ ನಿರ್ವಹಿಸಿರುವ ಈ ಡಾಕ್ಟರ್, ತನ್ನನ್ನು ಸಾಮಾನ್ಯರಲ್ಲಿ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿಕೊಂಡು ತಮ್ಮ ಶ್ರೇಷ್ಠತೆಯನ್ನು ತೋರಿಸಿದ್ದಾರೆ ಎಂದು ಸಂಘದ ಕಾರ್ಯಕರ್ತರು ಪ್ರತಿಕ್ರಿಯಿಸಿದ್ದಾರೆ.