ಬೆಂಗಳೂರು: ಬೀದರ್ ನಗರಕ್ಕೆ ನಾಗರಿಕ ವಿಮಾನಯಾನ ಸೇವೆ ಪುನಾರಂಭಿಸುವ ನಿಟ್ಟಿನಲ್ಲಿ ವಿಮಾನಯಾನ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಪರಿಸರ ಸಚಿವ ಈಶ್ವರ ಖಂಡ್ರೆ ಪತ್ರ ಬರೆದಿದ್ದಾರೆ.
ಬೀದರ್ ಜಿಲ್ಲಾ ಕೇಂದ್ರಕ್ಕೆ ಉಡಾನ್ ಯೋಜನೆಯಡಿಯಲ್ಲಿ ನಾಗರಿಕ ವಿಮಾನಯಾನ ಸೇವೆ ಆರಂಭಿಸಿದ್ದರಿಂದ ಇಲ್ಲಿನ ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ, ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳಿಗೆ, ಪ್ರವಾಸಿಗರಿಗೆ, ನಾಗರಿಕರೆಗೆ ತುಂಬಾ ಅನುಕೂಲವಾಗಿತ್ತು ಆದರೆ ಕಳೆದ 6 ತಿಂಗಳಿನಿಂದ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಬಿಡುಗಡೆಯಾಗಿಲ್ಲ ಎಂಬ ಕಾರಣಕ್ಕೆ ನಾಗರಿಕ ವಿಮಾನಯಾನ ರದ್ದು ಮಾಡಲಾಗಿದ್ದು, ಈಗ ವಿಮಾನ ಯಾನ ಸೇವೆ ಸ್ಥಗಿತಗೊಂಡಿರುವುದರಿಂದ ಅನಾನುಕೂಲವಾಗಿದೆ ಎಂದವರು ಗಮನಸೆಳೆದಿದ್ದಾರೆ.
ಈ ಹಿಂದೆ ವಿಮಾನಯಾನ ಸೇವೆ ನೀಡುತ್ತಿದ್ದ ವಿಮಾನಯಾನ ಸಂಸ್ಥೆ ಜೊತೆ ತಾವು ಮಾತನಾಡಿದ್ದು, ಸಬ್ಸಿಡಿ ಕೊಟ್ಟರೆ ನಾಗರಿಕ ವಿಮಾನಯಾನ ಸೇವೆ ಪುನಾರಂಭ ಮಾಡುವುದಾಗಿ ತಿಳಿಸಿದ್ದಾರೆ, ಈ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳೊಂದಿಗೆ ಶೀಘ್ರ ಸಭೆ ಕರೆದು ವಿಮಾನ ಯಾನ ಸೇವೆ ಪುನಾರಂಭಿಸಲು ಕ್ರಮ ವಹಿಸುವಂತೆ ಖಂಡ್ರೆ ಅವರು ಈ ಪತ್ರದಲ್ಲಿ ಮನವಿ ಮಾಡಿದ್ದಾರೆ.