ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಬಂಧನವಾಗಿದ್ದು, ಮತ್ತೊಬ್ಬ ಹಾಸ್ಯ ನಟ ಅವರನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿರುವ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
ನಟ ಚಿಕ್ಕಣ್ಣ ಅವರಿಗೆ ನೊಟೀಸ್ ನೀಡಿರುವ ಪೊಲೀಸರು ಸೋಮವಾರ ವಿಚಾರಣೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆಗೂ ಮುನ್ನಾ ಸ್ಟೋನಿ ಬ್ರೂಕ್ ಪಬ್‌ನಲ್ಲಿ ನಟ ದರ್ಶನ್ ಟೀಮ್ ಪಾರ್ಟಿ ನಡೆಸಿತ್ತು ಎನ್ನಲಾಗಿದೆ. ಆ ಪಾರ್ಟಿಯಲ್ಲಿ ಚಿಕ್ಕಣ್ಣ ಕೂಡಾ ಭಾಗಿಯಾಗಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ವಿಚಾರಣೆ ನಡೆಸಿದೆ.
ಆರೋಪಿಗಳ ಉಪಸ್ಥಿತಿಯಲ್ಲಿ ಚಿಕ್ಕಣ್ಣ ಸಮ್ಮುಖದಲ್ಲಿ ಸ್ಟೋನಿ ಬ್ರೂಕ್ ಪಬ್‌ನಲ್ಲಿ ಪೊಲೀಸರು ಸೋಮವಾರ ಮಹಜರು ನಡೆಸಿದ್ದಾರೆ. ಬಳಿಕ ರಾತ್ರಿ ಅನ್ನಪೂರ್ಣೇಶ್ವರ ನಗರ ಠಾಣೆಯಲ್ಲಿ ಚಿಕ್ಕಣ್ಣ ಅವರನ್ನು ವಿಚಾರಣೆಗೆ ಗುರಿಪಡಿಸಿರುವ ಪೊಲೀಸರು, ಕೊಲೆ ಕೇಸ್ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.
ಈ ನಡುವೆ, ದರ್ಶನ್ ಊಟಕ್ಕೆ ಕರೆದಿದ್ದ ಕಾರಣ ತಾನು ಪಾರ್ಟಿಗೆ ತೆರಳಿದ್ದು, ಈ ಕೊಲೆ ಕೇಸಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಟ ಚಿಕ್ಕಣ್ಣ ಹೇಳಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಮಾಧ್ಯಮಗಳ ಸುದ್ದಿಯಿಂದಲೇ ತಿಳಿದಿರುವುದು ಎಂದು ನಟ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.