ಬೆಂಗಳೂರು: ಸಾರಿಗೆ ನಿಗಮಗಳಿಗೂ, ರಾಜ್ಯದ ಮಹಿಳೆಯರಿಗೂ ಶಕ್ತಿ ತಂದುಕೊಟ್ಟಿರುವ ಗ್ಯಾರೆಂಟಿ ಯೋಜನೆ ‘ಶಕ್ತಿ’ ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆ ನಂತರ ಗ್ಯಾರೆಂಟಿ ಯೋಜನೆಗಳು ರದ್ದಾಗಲಿವೆ ಎಂದು ಪ್ರತಿಪಕ್ಷಗಳು ಟೀಕಿಸುತ್ತಿದ್ದವು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪರಾಜಿತ ಅಭ್ಯರ್ಥಿ ಲಕ್ಷ್ಮಣ್ ಅವರೂ ಗ್ಯಾರೆಂಟಿ ಯೋಜನೆ ಬಗ್ಗೆ ನೀಡಿರುವ ಹೇಳಿಕೆಯೂ ಗೊಂದಲ ಸೃಷ್ಟಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು, ಯಾವುದೇ ಕಾರಣಕ್ಕೂ ‘ಶಕ್ತಿ’ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಇದೇ ವೇಳೆ, ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಹಾಕಿರುವ ಸಚಿವ ರಾಮಲಿಂಗ ರೆಡ್ಡಿ, ‘ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಮತ ಪಡೆಯೋದಕ್ಕಾಗಿ ನೀಡಿಲ್ಲ. ಲೋಕಸಭಾ ಚುನಾವಣೆಯವರೆಗೆ ಅಂತ ನಿಗದಿ ಮಾಡಿಲ್ಲ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆಯನ್ನು ನಿಲ್ಲಿಸುವುದಿಲ್ಲ’ ಎಂದಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ್ದ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದರು. ಅವರಿಗೆ ಸಹಾಯ ಮಾಡೋದಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಇದರಿಂದ ಬಡ, ಮಧ್ಯಮ ವರ್ಗದವರಿಗೆ ಸಹಾಯ ಆಗಿದೆ ಎಂದಿರುವ ಸಚಿವರು, ಸಿಎಂ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಗಾಗಿ ಬಜೆಟ್ ನಲ್ಲಿ ಸುಮಾರು 5,500 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಶಕ್ತಿ ಯೋಜನೆಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಇರುವವರೆಗೂ ಶಕ್ತಿ ಯೋಜನೆ ಇರುತ್ತೆ. ಯಾರಿಗೂ ಅನುಮಾನ ಬೇಡ. ಮುಂದೆಯೂ ಸಹ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಗಲೂ ಶಕ್ತಿ ಯೋಜನೆ ಇರುತ್ತದೆ ಎಂದು ರಾಮಲಿಂಗ ರೆಡ್ಡಿ ಅವರು ರಾಜ್ಯದ ಜನರಿಗೆ ಅಭಯ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಮತ ಪಡೆಯೋದಕ್ಕಾಗಿ ನೀಡಿಲ್ಲ. ಲೋಕಸಭಾ ಚುನಾವಣೆಯವರೆಗೆ ಅಂತ ನಿಗದಿ ಮಾಡಿಲ್ಲ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆಯನ್ನು ನಿಲ್ಲಿಸುವುದಿಲ್ಲ.
ಶ್ರೀ @narendramodi ನೇತೃತ್ವದ ಕೇಂದ್ರ ಸರ್ಕಾರ ಮಾಡಿದ್ದ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದರು. ಅವರಿಗೆ ಸಹಾಯ ಮಾಡೋದಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು… pic.twitter.com/Yuj1fznS6v
— Ramalinga Reddy (@RLR_BTM) June 8, 2024