ನವದೆಹಲಿ: ಆಮ್ ಆದ್ಮಿ ಪಕ್ಷದ ವರಿಷ್ಠ ನಾಯಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಕ್ಯಾನ್ಸರ್ ಕಾಯಿಲೆಯ ಲಕ್ಷಣಗಳು ಗೋಚರಿಸಿವೆ ಎಂಬ ಆಘಾತಕಾರಿ ಸಂಗತಿಯನ್ನು ಆಮ್ ಆದ್ಮಿ ಪಕ್ಷದ ಮುಖಂಡರು ಬಹಿರಂಗಪಡಿಸಿದ್ದಾರೆ. ಇದೇ ವಿಚಾರವನ್ನು ಮುಂದಿಟ್ಟು ಕೇಜ್ರಿವಾಲ್ ಅವರ ಜಾಮೀನು ವಿಸ್ತರಣೆಗೆ ಕೋರಲಿದ್ದಾರೆ ಎಂದೂ ನಾಯಕರು ತಿಳಿಸಿದ್ದಾರೆ.
ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್ ಅವರು ಇದೀಗ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಈ ಜಾಮೀನು ಅವಧಿ ಜೂ.1ಕ್ಕೆ ಮುಕ್ತಾಯವಾಗಲಿದೆ. ಮಧ್ಯಂತರ ಜಾಮೀನನ್ನು ತಮ್ಮ ಅನಾರೋಗ್ಯದ ಹಿನ್ನೆಲೆ ಜಾಮೀನು ಅವಧಿಯನ್ನು 7 ದಿನ ವಿಸ್ತರಣೆ ಕೋರಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಇದೇ ವೇಳೆ, ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಕ್ಯಾನ್ಸರ್ ಇರುವ ಸಾಧ್ಯತೆಯಿದೆ ಎಂದು ದೆಹಲಿಯ ಆಮ್ ಆದ್ಮಿ ಪಕ್ಷ ಸರ್ಕಾರದ ಸಚಿವೆ ಆತಿಶಿ ಹೇಳಿದ್ದಾರೆ. ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಕೇಜ್ರಿವಾಲ್ ಅವರಲ್ಲಿ ಕೀಟೋನ್ ಪ್ರಮಾಣ ಹೆಚ್ಚಾಗಿದೆ. ದಿಢೀರ್ ತೂಕ ಇಳಿಕೆಯಾಗಿದ್ದು, ಇದು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಲಕ್ಷಣಗಳಾಗಿವೆ ಎಂದು ಎಂದು ಸಚಿವೆ ಆತಿಶಿ ಹೇಳಿದ್ದಾರೆ.