ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಗೀತಾ ಶಿವರಾಜಕುಮಾರ್ ಅವರನ್ನು ಈಡಿಗ ಮತ್ತು ಬಿಲ್ಲವ ಸಮುದಾಯದವರು ಮತ ನೀಡಿ ಗೆಲ್ಲಿಸಬೇಕು ಎಂದು ಈಡಿಗರ ಸಂಘದ ನಿರ್ದೇಶಕರು, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಹಕಾರಿ ನಾಯಕ ಡಾ. ಆರ್ ಎಂ.ಮಂಜುನಾಥ ಆಪ್ತ ಕುರುವಳ್ಳಿ ನಾಗರಾಜ್ ಈಡಿಗ ಸಮುದಾಯದ ಬಾಂಧವರಿಗೆ ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಗೀತಾ ಶಿವರಾಜ್ ಕುಮಾರ್, ಡಾ.ರಾಜ್ ಕುಮಾರ್ ಅವರ ಸೊಸೆಯಾಗಿ, ಬಂಗಾರಪ್ಪನವರ ಪುತ್ರಿಯಾಗಿ, ಸಚಿವ ಮಧು ಬಂಗಾರಪ್ಪ ಅವರ ಸಹೋದರಿಯಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸೇವೆಯನ್ನು ನೀಡಿರುವ ಕುಟುಂಬಕ್ಕೆ ಸೇರಿದ್ದಾರೆ. ಈಡಿಗ ಸಮುದಾಯದ ಆಸ್ತಿ ಕೂಡ ಆಗಿದ್ದಾರೆ. ಅವರ ಗೆಲುವಿಗಾಗಿ ಎಲ್ಲಾ ಕಡೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಮುದಾಯ ಪಕ್ಷಾತೀತವಾಗಿ ಗೀತಾ ಶಿವರಾಜ್ ಕುಮಾರ್ ಅವರನ್ನು ಬೆಂಬಲಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಜೊತೆಗೆ ಬಂಗಾರಪ್ಪನವರ ಸೇವೆಯನ್ನು ಸ್ಮರಿಸುವ ಅವಕಾಶವನ್ನು ಮಾಡಿಕೊಡಬೇಕೆಂದು ಈಡಿಗ ಸಮುದಾಯದಲ್ಲಿ ತೀರ್ಥಹಳ್ಳಿ ಈಡಿಗ ಸಂಘದ ನಿರ್ದೇಶಕರು, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರೂ ಆದ ಕುರುವಳ್ಳಿ ನಾಗರಾಜ್ ಮನವಿ ಮಾಡಿದ್ದಾರೆ.
























































