ಶಿವಮೊಗ್ಗ; ಬಿಜೆಪಿ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ದ ತೊಡೆತಟ್ಟಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ತಮ್ಮ ನೇತೃತ್ವದ ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ಮರುಸಂಘಟನೆಯ ಸುಳಿವು ನೀಡಿದ್ದಾರೆ.
ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ವಿರುದ್ದ ಧ್ವನಿ ಎತ್ತಿರುವ ಮಾಜಿ ಉಪಮುಖ್ಯಮಂತ್ರಿಯೂ ಆದ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್‌ವೈ ಪುತ್ರ ಬಿ.ವೈ.ರಾಘವೇಂದ್ರ ವಿರುದ್ದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ತಮ್ಮ ಬಂಡಾಯ ಸ್ಪರ್ಧೆಯ ನಡುವೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ತಮ್ಮ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮರು ಸ್ಥಾಪನೆಯ ಅಗತ್ಯದ ಬಗ್ಗೆ ಪ್ರತಿಪಾದಿಸಿದರು.
ಹಿಂದುಳಿದವರಿಗೆ, ಅತಿ ಹಿಂದುಳಿದವರಿಗೆ ನ್ಯಾಯ ಸಿಗಬೇಕು ಅಂತ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಪ್ರಾರಂಭಿಸಿದ್ದೆ. ಅದು ಈಗಲೂ ಇದ್ದಿದ್ದರೆ ಹಿಂದುಳಿದ ವರ್ಗದವರಿಗೆ ಅನುಕೂಲವಾಗುತ್ತಿತ್ತು ಎಂದ ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡನ್ನು ನಿಲ್ಲಿಸುವಂತೆ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅಮಿತ್ ಶಾ ಹೇಳಿದಾಗ ಮರು ಮಾತನಾಡದೆ ನಿಲ್ಲಿಸಿದೆ. ಇದೀಗ ಆ ಸಂಘಟನೆ ಇದ್ದಿದ್ದರೆ ಹಿಂದುಳಿದವರಿಗೆ ನ್ಯಾಯ ಸಿಗುತ್ತಿತ್ತೇನೋ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಮುಗಿದ ನಂತರ ಹಿಂದುಳಿದವರ, ದಲಿತರ ರಾಜ್ಯ ಮಟ್ಟದ ಸಭೆ ಕರೆಯುವುದಾಗಿ ತಿಳಿಸಿದ ಅವರು, ಮತ್ತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸುವ ಸುಳಿವು ನೀಡಿದರು.