ಮಂಗಳೂರು: ಲೋಕಸಭೆ ಚುನಾವಣೆ ಅಂತಿಮ ಹಂತದಲ್ಲಿದ್ದು ಕರ್ನಾಟಕದ 14 ಜಿಲ್ಲೆಗಳಲ್ಲಿ ಮತದಾನಕ್ಕೆ ತಯಾರಿ ನಡೆದಿದೆ. ಈ ನಡುವೆ ಮತದಾನಕ್ಕೆ ಒಂದು ದಿನ ಬಾಕಿ ಇರುವಾಗಲೇ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಪತ್ರವೊಂದು ವೈರಲ್ ಆಗಿದೆ. ಇದನ್ನು ನಕಲಿ ಎಂದಿರುವ ಬಿಜೆಪಿ ನಾಯಕರು, ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪ್ರಭಾವಿ ಬಂಟ ಸಮುದಾಯಕ್ಕೆ ಸೇರಿದವರು. ಹೀಗಾಗಿ ಬಂಟ ಬ್ರಿಗೇಡ್ ಹೆಸರಿನಲ್ಲಿ ಜಾತಿ ಪತ್ರವನ್ನು ವೈರಲ್ ಮಾಡಲಾಗಿದೆ ಎಂಬುದು ಆರೋಪ.
‘ಬಂಟ ಬ್ರಿಗೇಡ್’ ಹೆಸರಲ್ಲಿ ಕರಪತ್ರ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಉಲ್ಲೇಖಿಸಿ, ‘ಶೂದ್ರ ವರ್ಗದ ಆಳಲು ಹೊರಟರೆ ನಾವು ಸಹಿಸಲು ಸಾಧ್ಯವೇ?” ಎಂಬ ಅಂಶಗಳನ್ನು ಈ ಕರಪತ್ರ ಒಳಗೊಂಡಿದ್ದು, ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಅದರಲ್ಲಿ ತಿಳಿಸಲಾಗಿದೆ.
ಈ ಕರಪತ್ರವು ಬಿಲ್ಲವ ಸಮುದಾಯವನ್ನು ಟಾರ್ಗೆಟ್ ಮಾಡಿ ಬರೆಯಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಬೆಂಬಲಿಗರು ಆರೋಪಿಸಿದ್ದಾರೆ. ಇದೇ ವೇಳೆ, ನಕಲಿ ಪತ್ರ ಹರಿಯಬಿಟ್ಟು ಪಕ್ಷದ ಅಭ್ಯರ್ಥಿಗೆ ಹಿನ್ನಡೆ ಉಂಟು ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಕಾನೂನು ಪ್ರಕೋಷ್ಠದ ಸಹಸಂಚಾಲಕರಾದ ದೇವಿಪ್ರಸಾದ್ ಎ. ಸಾಮಾನಿ ಅವರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲ, ನಕಲಿ ಪತ್ರ ಹರಿಯಬಿಟ್ಟು ಪಕ್ಷದ ಅಭ್ಯರ್ಥಿಗೆ ಹಿನ್ನಡೆ ಉಂಟು ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುನ್ನವೇ ಸೋಲೊಪ್ಪಿಕೊಂಡಿದೆ ಎಂದಿದೆ.
ದೂರಿನಲ್ಲಿ ಏನಿದೆ:
ಬಂಟ ಬಿಗ್ರೇಡ್ ಎಂಬ ಹೆಸರಿನಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರವರ ಭಾವಚಿತ್ರ ಮತ್ತು ಆಕ್ಷೇಪಾರ್ಹ ಬರಹಗಳನ್ನು ಮುದ್ರಿಸಿ ಸಾಮಾಜಿಕ ಜಾಲತಾಣ ಹಾಗೂ ಕರಪತ್ರಗಳ ಮೂಲಕ ಪಸರಿಸಿ ಜಾತಿಜಾತಿಗಳ ನಡುವೆ ದ್ವೇಷ ಹುಟ್ಟುವಂತೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ದುರ್ಲಾಭ ಪಡೆಯುತ್ತಿದ್ದಾರೆ ಎಂದು ದೇವಿಪ್ರಸಾದ್ ಎ. ಸಾಮಾನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಾನು ಬಿಜೆಪಿ ಕಾನೂನು ಪ್ರಕೋಷ್ಠದ ದಕ್ಷಿಣ ಕನ್ನಡ ಜಿಲ್ಲೆಯ ಸಹಸಂಚಾಲಕನಾಗಿರುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆಗೆ 2 ದಿನಗಳು ಬಾಕಿ ಇರುವ ಸಮಯದಲ್ಲಿ ಬಂಟ ಬಿಗ್ರೇಡ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಕರಪತ್ರವನ್ನು ಮುದ್ರಿಸಿ ಸದ್ರಿ ಕರಪತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರವರ ಭಾವಚಿತ್ರ, ಹೆಸರು ಹಾಗೂ ಆಕ್ಷೇಪಾರ್ಹ ಬರಹಗಳನ್ನು ಮುದ್ರಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಪಸರಿಸಿ ಜಾತಿ ಜಾತಿಗಳ ದ್ವೇಷ ಬರುವಂತೆ ಮಾಡಿ ಅದರ ದುರ್ಲಾಭವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯು ಪಡೆಯುತ್ತಿದ್ದಾರೆ. ಕರಪತ್ರದಲ್ಲಿರುವ ಬಂಟ ಬ್ರಿಗೇಡ್ ಎಂಬ ಯಾವುದೇ ಸಂಸ್ಥೆಯು ಅಸ್ತಿತ್ವದಲ್ಲಿರುವುದಿಲ್ಲ. ಹಾಗೂ ಯಾವುದೇ ಕಾರ್ಯಚಟುವಟಿಕೆಯನ್ನು ಮಾಡುವುದು ಕಂಡು ಬರುವುದಿಲ್ಲ.
ಚುನಾವಣೆಗೆ 2 ದಿನಗಳು ಬಾಕಿಯಿರುವ ಸಂದರ್ಭದಲ್ಲಿ ಮತದಾರರಿಗೆ ಪ್ರಭಾವ ಬೀರುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯು ಈ ರೀತಿಯಾದ ವಿಚಾರಗಳನ್ನು ಪಸರಿಸಿ ದುರ್ಲಾಭ ಪಡೆಯುತ್ತಿದ್ದು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದು ದೇವಿಪ್ರಸಾದ್ ಎ. ಸಾಮಾನಿ ಅವರು ಈ ದೂರಿನಲ್ಲಿ ಕೋರಿದ್ದಾರೆ.