ಬೈಂದೂರು: ತೀವ್ರ ಜಿದ್ದಾಜಿದ್ದಿನ ಅಖಾಡವೆನಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯೊಳಗಿನ ಬಂಡಾಯದ ಪರಿಸ್ಥಿತಿಯ ಲಾಭ ಪಡೆಯಲು ಕಾಂಗ್ರೆಸ್ ಹರಸಾಹಸ ನಡೆಸುತ್ತಿದೆ. ಬಿಜೆಪಿಯಲ್ಲಿ ಒಂದೆಡೆ ಯಡಿಯೂರಪ್ಪ ಪುತ್ರ ರಾಘವೇಂದ್ರ ಸ್ಪರ್ಧೆ, ಇನ್ನೊಂದೆಡೆ ಹಿರಿಯ ನಾಯಕ ಈಶ್ವರಪ್ಪ ಬಂಡಾಯ, ಈ ಪರಿಸ್ಥಿತಿಯಿಂದಾಗಿ ಕಮಲ ಪಕ್ಷದ ನಾಯಕರು ಸಂದಿಗ್ದ ಸ್ಥಿತಿಯಲ್ಲಿದ್ದರೆ, ಕಾಂಗ್ರೆಸ್ ನಾಯಕರು ಮಾತ್ರ ಭರ್ಜರಿ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಪ್ರಮುಖವಾಗಿ ಈಡಿಗ-ಬಿಲ್ಲವ, ಅಲ್ಪಸಂಖ್ಯಾತರ ಕಡೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಮಹಿಳೆಯರ ಮತಗಳತ್ತ ಚಿತ್ತ ಹರಿಸಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಜಿ.ಎ.ಬಾವಾ ಅವರು ನಡೆಸುತ್ತಿರುವ ಕಾರ್ಯತಂತ್ರ ಗಮನಸೆಳೆದಿದೆ.
ಬಿಲ್ಲವ ಮತದಾರರೇ ಹೆಚ್ಚಿರುವ ಉಡುಪಿ ಜಿಲ್ಲೆ ಬೈದೂರಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೈಂದೂರು ಬ್ಲಾಕ್ ಮಹಿಳಾ ಪದಾಧಿಕಾರಿಗಳ ಈ ಸಭೆಯಲ್ಲಿ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಗೌರಿ ದೇ ವಾಡಿಗ, ಸಹಿತ ಹಲವು ಮುಖಂಡರು ಭಾಗವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ಜಿ.ಎ.ಬಾವಾ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಸುಕುಮಾರ ಶೆಟ್ಟಿಯವರೂ ಪಾಲ್ಗೊಂಡು ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಜಿ.ಎ.ಬಾವಾ, ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಡಬಲ್ ಇಂಜಿನ್ ಸರ್ಕಾರದ ಕಾಣಸಿನಲ್ಲಿದ್ದರೆ, ಕಾಂಗ್ರೆಸ್ ಡಬಲ್ ಗ್ಯಾರಂಟೀ ಯೋಜನೆ ಮೂಲಕ ದೇಶದ ಪ್ರತೀ ಮನೆಯ ಯಜಮಾನಿಯರ, ರೈತರ ಏಳಿಗೆ ಬಗ್ಗೆ ಯೋಚನೆ ಮಾಡುತ್ತಿದೆ ಎಂದರು. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ ಮೂಲಕ ಮನೆ ಯಜಮಾನಿಯರಿಗೆ ವಾರ್ಷಿಕ ೧ ಲಕ್ಷ ರೂಪಾಯಿ ಗ್ಯಾರೆಂಟಿ ಹಣ ಸಿಗಲಿದೆ. ರೈತರಿಗೂ ಭರ್ಜರಿ ನೆರವು ಸಿಗಲಿದೆ ಎಂದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರೆಂಟಿ ಯೋಜನೆಗಳು ಜಾರಿಯಾಗಿದ್ದು ಮಹಿಳೆಯರ ಪಾಲಿಗೆ ಈ ಯೋಜನೆಗಳು ಆಶಾಕಿರಣವಾಗಿವೆ. ಅದರಂತೆ ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದುಪ್ಪಟ್ಟು ಗ್ಯಾರೆಂಟಿ ಯೋಜನೆಗಳು ಜಾರಿಗೆ ಬರಲಿದೆ ಎಂದರು. ಗ್ಯಾರೆಂಟಿ ವಿಷಯದಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಕೇಂದ್ರದಲ್ಲೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ, ರೈತರಿಗೆ, ಯುವಜನರಿಗೆ ಹಾಗೂ ಶ್ರಮಿಕರಿಗಾಗಿ ನೀಡಿರುವ ಗ್ಯಾರೆಂಟಿ ಯೋಜನೆಗಳು ಜಾರಿಯಾಗಲಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಂತೆ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂಪಾಯಿ, ಯುವಕರಿಗೂ ವಾರ್ಷಿಕ 1 ಲಕ್ಷ ರೂಪಾಯಿ, ನರೇಗಾ ಯೋಜನೆಯಲ್ಲಿ ಪ್ರತಿದಿನ 400 ರೂಪಾಯಿ, ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ, ಸಾಲಮನ್ನಾ ಯೋಜನೆ ಜಾರಿಗೆ ಬರಲಿದೆ ಎಂದ ಜಿ.ಎ.ಬಾವಾ, ಈ ಯೋಜನೆಗಳು ಬಿಜೆಪಿ ನಾಯಕರು ನೀಡಿರುವ ರೀಯಲ್ಲಿ ಸುಳ್ಳಿನ ಕಂತೆಗಳಾಗಲ್ಲ ಎಂದರು.
ಶಿವಮೊಗ್ಗ ಕ್ಷೇತ್ರದಲ್ಲಿ ರಾಜ್ ಕುಮಾರ್ ಸೊಸೆ ಹಾಗೂ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಮತದಾರರ ಒಲವು ಕಾಂಗ್ರೆಸ್ ಪರವಾಗಿ ವ್ಯಕ್ತವಾಗುತ್ತಿದೆ ಎಂದ ಜಿ.ಎ.ಬಾವಾ, ಈ ಬಾರಿ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗಡೆಯವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಕಾಂಗ್ರೆಸ್ ಪಣತೊಟ್ಟಿದೆ ಎಂದ ಜಿ.ಎ.ಬಾವಾ, ಬಿಜೆಪಿಯಿಂದ ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ, ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರಾಧಾನ್ಯತೆ ಸಿಗಲಿದೆ, ಸಂಪುಟ ಹಾಗೂ ಹುದ್ದೆಗಳಲ್ಲಿ 50% ಸ್ಥಾನ ಮೀಸಲಿಡಲಾಗುತ್ತದೆ ಎಂದರು. ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವು 6 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಿದ್ದಾರೆ, ಬಿಜೆಪಿಯಿಂದ ಒಬ್ಬ ಮಹಿಳೆಗಷ್ಟೇ ಸೀಟು ಕೊಟ್ಟಿದೆ ಎಂದು ಉದಾಹರಿಸಿದರು.