ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ವಿರುದ್ಧ ಕಾಂಗ್ರೆಸ್ ಪಕ್ಷವು ರಾಜ್ಯ ಚುನಾವಣಾ ಆಯೋಗಕ್ಕೆ ಬುಧವಾರ ದೂರು ನೀಡಿದೆ.
ಚುನಾವಣಾ ಆಯೋಗಕ್ಕೆ ದೂರು ನೀಡುವ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಹ ಅಧ್ಯಕ್ಷರಾದ ವಿಜಯ್ ಮತ್ತೀಕಟ್ಟಿ, ಕೆಪಿಸಿಸಿ ಕಾನೂನು ಘಟಕದ ಉಪಾಧ್ಯಕ್ಷರಾದ ದಿವಾಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚುನಾವಣ ಆಯೋಗದ ಕಚೇರಿ ಮುಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು, “ಇಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ದೂರು ದಾಖಲಿಸಿದ್ದೇವೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಎಲ್ಲಾ ಸಮುದಾಯ ಹಾಗೂ ವರ್ಗದ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಮಾಡಿ ಆಮೂಲಕ ಬಸವ ತತ್ವವನ್ನು ಪಸರಿಸುವ ಕೆಲಸ ಮಾಡಲಾಗುತ್ತಿದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಎಲ್ಲಾ ನಾಯಕರು ಹಿಂದೂಗಳೇ. ಆದರೆ ಬಿಜೆಪಿ ನಾಯಕರಿಗೆ ನಕಲಿ ಖಾತೆಗಳ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರನ್ನು ಹಣಿಯುವ ಕಾಯಿಲೆ ಅಂಟು ರೋಗದಂತಿದೆ ಎಂದು ಟೀಕಿಸಿದರು.
ಬಿಜೆಪಿ ನಾಯಕರು ಕೆಲವು ನಕಲಿ ಖಾತೆ ಹಾಗೂ ಬಿಜೆಪಿಯ ಕೆಲವು ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಿದ್ದರಾಮಯ್ಯ ಅವರು ಹಿಂದೂಗಳ ಮತ ಬೇಡ ಎಂದು ಹೇಳಿದ್ದಾರೆಂಬ ಸುಳ್ಳು ಸುದ್ದಿ ಸೃಷ್ಟಿ ಮಾಡಿ ಪ್ರಕಟಿಸಿದ್ದಾರೆ. ಬಿಜೆಪಿಗೆ ಸಂಬಂಧಿಸಿದ ಖಾತೆಗಳ ಮೂಲಕವೇ ಈ ಸುಳ್ಳು ಸುದ್ದಿ ಹರಡಿದೆ. ಇದರ ಮೂಲ ಹುಡುಕಿದಾಗ ತುಮಕೂರಿನ ಗೂಳೂರು ಕೇಂದ್ರದಿಂದ ಹರಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ ಎಂದರು.
ಎಲ್ಲೊ ಕೂತುಕೊಂಡು ಸುಳ್ಳು ಸುದ್ದಿ ಹರಡುವುದು ಬಿಜೆಪಿಯ ಜಾಯಮಾನವಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಹಾಗೂ ವಿರೋಧ ಪಕ್ಷದ ನಾಯಕ ಅಶೋಕ್ ಅವರ ಕೈವಾಡ ಇದೆ ಎಂದು ನಾವು ಭಾವಿಸುತ್ತೇವೆ. ಇವರ ವಿರುದ್ಧ ನೀತಿ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ಐಪಿಸಿ, ಜನಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದ ರಮೇಶ್ ಬಾಬು, ಇಂತಹ ಸುಳ್ಳುಸುದ್ದಿ ತಡೆಯದಿದ್ದರೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎಲ್ಲಾ ವರ್ಗದವರನ್ನು ಒಟ್ಟಾಗಿ ಕರೆದೊಯ್ಯುವ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ಯೋಜನೆಗಳು ಎಲ್ಲಾ ವರ್ಗದವರಿಗೆ ಅನ್ವಯವಾಗುವಂತೆ ಇವೆ. ನಮ್ಮ ಸರ್ಕಾರದ ಪ್ರಗತಿ ಸಹಿಸಲಾಗದೆ ಬಿಜೆಪಿ ನಾಯಕರು ಸುಳ್ಳು ಸುದ್ದಿ ಹರಡುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ನಂತರ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಿಲ್ಲ. ಕೇವಲ ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯದ ಸಿದ್ಧಾಂತದ ಮೇಲೆ ಕೆಲಸ ಮಾಡಿಕೊಂಡು ಬಂದಿದೆ ಎಂದರು.
ಬಿಜೆಪಿ ಸ್ನೇಹಿತರು ಹತಾಶರಾಗಿ ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಇದರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಿದ್ದೇವೆ. ಇದರ ಮೂಲ ಹುಡುಕಿ ಇದಕ್ಕೆ ಕಾರಣರಾಗಿರುವವರನ್ನು ಜೈಲಿಗೆ ಕಳುಹಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕು ಎಂದು ರನೇಶ್ ಬಾಬು ಮನವಿ ಮಾಡಿದರು.
ರಾಜ್ಯ ಸರ್ಕಾರದ ಫ್ಯಾಕ್ಟ್ ಚೆಕ್ ವಿಭಾಗದ ಪಾತ್ರದ ಬಗ್ಗೆ ಪ್ರಶ್ನೆ ಕೇಳಿದಾಗ, “ರಾಜ್ಯ ಸರ್ಕಾರದ ವಿಭಾಗ ಚುನಾವಣೆ ವಿಚಾರದಲ್ಲಿ ಕೆಲಸ ಮಾಡಲು ಆಗುವುದಿಲ್ಲ. ಆ ವಿಭಾಗ ಕೇವಲ ಸರ್ಕಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಕಾರ್ಯನಿರ್ವಹಿಸಲಿದೆ. ಚುನಾವಣೆಗೆ ಸಂಬಂಧಿಸಿದ ವಿಚಾರದಲ್ಲಿ ಚುನಾವಣಾ ಆಯೋಗವೇ ಪರಿಶೀಲನೆ ನಡೆಸಬೇಕು” ಎಂದರು.ಪ್ರತಿಪಾದಿಸಿದ ರಮೇಶ್ ಬಾಬು, ಚುನಾವಣೆ ಘೋಷಣೆ ಮುನ್ನವೇ ಆಯೋಗವು ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು ಎಂದು ಕೇಳಿದಾಗ, “ಚುನಾವಣಾ ಆಯೋಗದ ಮೇಲೆ ವಿಶ್ವಾಸವಿಟ್ಟು ನಾವು ದೂರು ನೀಡಿದ್ದೇವೆ. ಇಂದು ಬೆಳಗ್ಗೆ ಬಿಡದಿ ಘಟನೆಗೆ ಸಂಬಂಧಿಸಿದಂತೆ ಆಯೋಗ ತಕ್ಷಣ ಕ್ರಮ ಕೈಗೊಂಡಿದ್ದು, ಈ ವಿಚಾರದಲ್ಲೂ ಆಯೋಗವು ತ್ವರಿತವಾಗಿ ಕ್ರಮ ಕೈಗೊಳ್ಳುತ್ತಾರೆ. ಇದರ ಹಿಂದಿರುವವರು ಎಷ್ಟೇ ಪ್ರಭಾವಿ ನಾಯಕರಾದರೂ ಅವರ ವಿರುದ್ಧ ಕ್ರಮ ಜರುಗಿಸುವ ನಂಬಿಕೆ ಇದೆ” ಎಂದರು..