ಬೆಂಗಳೂರು: ಬಿಜೆಪಿ ಸ್ನೇಹಿತರು ನಮ್ಮನ್ನು ಆತ್ಮೀಯವಾಗಿ ಕಂಡಿದ್ದಾರೆ. 2006ರಲ್ಲಿ ಅನಿವಾರ್ಯ ಕಾರಣಗಳಿಂದ ಮೈತ್ರಿ ಸರಕಾರ ದೀರ್ಘ ಕಾಲ ಮುಂದುವರೆಯಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 2018ರಲ್ಲಿ ನಾವು- ನೀವು ಮೈತ್ರಿ ಸರಕಾರ ಮಾಡಿದ್ದರೆ ಇವತ್ತು ಸಹ ನಮ್ಮ ಸರಕಾರವೇ ಇರುತ್ತಿತ್ತೇನೋ ಎಂದು ಅಭಿಪ್ರಾಯಪಟ್ಟರು. ಈ ಹಿಂದೆ ನಡೆದುದೆಲ್ಲ ವಿಧಿಯ ಆಟಗಳು ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾತನಾಡಿದ ಹೆಚ್ಡಿಕೆ, ಇವತ್ತು ಕಳೆದ ವಿಧಾನಸಭೆ ಚುನಾವಣೆ ಬಳಿಕ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಸ್ವಲ್ಪ ನಿರಾಶೆ ಉಂಟಾಗಿದೆ. ಯಾಕೆ ಹೀಗಾಗಿದೆ? ನಮ್ಮಲ್ಲಿನ ಒಳಜಗಳ, ವಿಶ್ವಾಸದ ಕೊರತೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಎಂಬ ಚರ್ಚೆಗಳು ಮುಖಂಡರಲ್ಲಿ ನಡೆದಿವೆ. ನಂತರ ಬಿಜೆಪಿ ಶಕ್ತಿ ವೃದ್ಧಿ, ಪ್ರಧಾನಿಯವರ ನಿಸ್ವಾರ್ಥ ಸೇವೆ, ದೇಶದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕುವ ದೃಷ್ಟಿಯಿಂದ ಹಿರಿಯ ನಾಯಕ ಅಮಿತ್ ಶಾ ಅವರ ಆಹ್ವಾನದ ಮೇರೆಗೆ ಅವರನ್ನು ಭೇಟಿ ಮಾಡಿದೆ. ಬಳಿಕ ಪರಸ್ಪರ ಮೈತ್ರಿಯ ಹೊಂದಾಣಿಕೆ ಆಗಿದೆ ಎಂದರು.
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಲೋಕಸಭಾ ಚುನಾವಣೆಯ ರಾಜ್ಯ ಉಸ್ತುವಾರಿ ರಾಧಾಮೋಹನ್‍ದಾಸ್ ಅಗರವಾಲ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯದ ಮಾಜಿ ಸಚಿವ ಜಿ.ಟಿ. ದೇವೇಗೌಡ, ಎರಡೂ ಪಕ್ಷಗಳ ಆಹ್ವಾನಿತ ಮುಖಂಡರು ಭಾಗವಹಿಸಿದ್ದರು.


























































