ಬೆಂಗಳೂರು: ದಲಿತರೆಂಬ ಕಾರಣಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಅವಮಾನಿಸಿದಂತೆಯೇ ಬಿಜೆಪಿಯವರು ದಲಿತ ಸಮುದಾಯದ ಶಿವರಾಜ ತಂಗಡಗಿ ಅವರನ್ನೂ ಅವಮಾನಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆದ ರಮೇಶ್ ಬಾಬು, ಶಿವರಾಜ ತಂಗಡಗಿ ಅವರು ದಲಿತ ಸಮುದಾಯದ ವ್ಯಕ್ತಿ. ಉದ್ದೇಶಪೂರ್ವಕವಾಗಿ ದಲಿತರ ಮೇಲೆ ವಾಗ್ದಾಳಿ ನಡೆಸುವುದು ಬಿಜೆಪಿಯ ತಂತ್ರ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಅವಹೇಳನ ಮಾಡಿದ್ದರು. ಇದು ಅವರ ಸಂಸ್ಕೃತಿ ಎಂದರು.
ಚುನಾವಣೆ ವೇಳೆಯಲ್ಲಿ ಬಿಜೆಪಿಯವರು ಸಂಸ್ಕೃತಿಯನ್ನು ತೋರಿಸಿದ್ದಾರೆ. ಅಸಂವಿಧಾನಿಕ ಪದ ಬಳಸಿರುವ ಸಿ.ಟಿ.ರವಿ ಅವರ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದೇವೆ. ಸಿ.ಟಿ.ರವಿ ಅವರು ಬಳಸಿರುವ ಪದ ಸಂಘ- ಪರಿವಾರದಿಂದ ಬಂದಿರುವ ಬಳುವಳಿ ಎಂದ ರಮೇಶ್ ಬಾಬು, ತಂಗಡಗಿ ಅವರು ಬಿಜೆಪಿಯ ವೈಫಲ್ಯಗಳನ್ನು ಪ್ರಶ್ನಿಸುತ್ತಿರುವ ಕಾರಣ ಅವರ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಬಿಜೆಪಿಯ ಷಡ್ಯಂತ್ರ. ತಂಗಡಗಿಯವರಿಗೆ ಯಾರು ಕರೆ ಮಾಡಿದ್ದಾರೆ. ಕೇಶವ ಕೃಪದಲ್ಲಿ ಏಕೆ ಸಭೆ ನಡೆಸಿದರು, ಬಿಜೆಪಿ ಕಚೇರಿಯಲ್ಲಿ ಯಾರು, ಯಾರು ಇದರ ಬಗ್ಗೆ ಸಭೆ ನಡೆಸಿದ್ದಾರೆ ಎನ್ನುವ ಮಾಹಿತಿ ನಮ್ಮ ಬಳಿ ಇದೆ. ತಂಗಡಗಿ ಅವರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲು ಆಗುವುದಿಲ್ಲ ಎಂದರು.
ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿದರು ನಮ್ಮ ಭಾಷೆಯ ಅಭಿವೃದ್ದಿಗೆ ನಯಾ ಪೈಸೆ ನೀಡದ ಕೇಂದ್ರದ ವಿರುದ್ದ ತಂಗಡಗಿ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ರಮೇಶ್ ಬಾಬು ತಿಳಿಸಿದರು.