ಮಂಗಳೂರು: ಸದಾ ಒಂದಿಲ್ಲೊಂದು ಸೇವಾ ಕೈಂಕರ್ಯಗಳಿಂದ ಗಮನಕೇಂದ್ರೀಕರಿಸುತ್ತಿರುವ ಬಂಟ್ವಾಳ ಸಮೀಪದ ‘ಕಮ್ಮಾಜೆ ನಾಗಶ್ರೀ ಮಿತ್ರವೃಂದ’ ಇದೀಗ ಬಡ ಮಹಿಳೆಯೊಬ್ಬರಿಗೆ ಮನೆ ನಿರ್ಮಿಸಿಕೊಟ್ಟು ಸಮಾಜಿಕ ಸಂಘಟನೆಗಳಿಗೆ ಮಾದರಿಯಾಗಿದ್ದಾರೆ.
ಬಡಗಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ಕಮ್ಮಾಜೆ ನಾಗಶ್ರೀ ಮಿತ್ರವೃಂದದ ವತಿಯಿಂದ ಬಡ ಕುಟುಂಬದ ಪ್ರೇಮಾ ಎಂಬವರಿಗೆ ರೂ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಉಚಿತ ಮನೆಯನ್ನು ಭಾನುವಾರ ಹಸ್ತಾಂತರಿಸಲಾಯಿತು. ಈ ಸಂದರ್ಭದ ಸನ್ನಿವೇಶ ಗಮನಸೆಳೆಯಿತು.
ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ, ದೇಶದಲ್ಲಿ ಸಮಾಜಮುಖಿ ಚಿಂತನೆ ಹೊಂದಿರುವ ವಿವಿಧ ಸಂಘಟನೆಗಳು ಮತ್ತು ಆಡಂಬರಕ್ಕಾಗಿ ಅನಗತ್ಯ ಹಣ ಪೋಲು ಮಾಡುವ ಉದ್ಯಮಿಗಳು ಒಟ್ಟುಗೂಡಿ ವಸತಿ ರಹಿತ ಬಡ ಕುಟುಂಬಗಳಿಗೆ ಉಚಿತ ಮನೆ ಮತ್ತು ಶಿಕ್ಷಣದ ಜೊತೆಗೆ ಆರೋಗ್ಯ ಸೇವೆ ನೀಡಿದಾಗ ನಿಜವಾದ ‘ರಾಮರಾಜ್ಯ’ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ, ಸೇವಾ ಮನೋಭಾವದಿಂದ ಶ್ರಮ-ಹಣ ಕ್ರೋಡೀಕರಿಸಿ ಮನೆನಿರ್ಮಿಸಿಕೊಟ್ಟ ತ್ಯಾಗಮಯಿ ಯುವಜನರ ಕೈಂಕರ್ಯವನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಕೊಂಡಾಡಿದರು. ಯುವಜನರ ಕಾರ್ಯವನ್ನು ಪ್ರಶಂಸಿಸಿದರು.
ಸಮಾರಂಭದಲ್ಲಿ ಕಮ್ಮಾಜೆ ನಾಗಶ್ರೀ ಮಿತ್ರ ವೃಂದ ಅಧ್ಯಕ್ಷ ಪುಷ್ಪರಾಜ್, ನಾಗಶ್ರೀ ಮಾತೃ ವೃಂದ ಅಧ್ಯಕ್ಷೆ ಸಂಧ್ಯಾ, ಪ್ರಮುಖರಾದ ಶಶಿಧರ ಪೊಯ್ಯೆ, ಜೀವನ್ ಮಡಿಕೇರಿ, ಸವಿಜ್ ಪೊಳಲಿ, ತಿರುಮಲೇಶ್ ಬೆಳ್ಳೂರು, ಯೋಗೀಶ್ ತುಂಬೆ, ತಿಮ್ಮಪ್ಪ ಕಮ್ಮಾಜೆ, ಜಗದೀಶ ಕಡೆಗೋಳಿ, ತಿರುಲೇಶ್ ಬೆಳ್ಳೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.