ಮಂಗಳೂರು: ಕರಾವಳಿಯಲ್ಲಿ ಲೋಕಸಭಾ ಚುನಾವಣೆಯ ಕಾವು ಏರುತ್ತಿದ್ದು ಬಿಜೆಪಿ ಪ್ರಚಾರಕ್ಕೆ ಮುನ್ನುಡಿ ಬರೆದಿದೆ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಂಗಳೂರು ಸಹಿತ ದಕ್ಷಿಣ ಕನ್ನಡದಾದ್ಯಂತ ಭರ್ಜರಿ ಸವಾರಿ ಕೈಗೊಂಡಿದ್ದಾರೆ.
ಈ ಬಾರಿಯೂ ಕ್ಷೇತ್ರವನ್ನು ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿರುವ ಬಿಜೆಪಿ, ಇದೀಗ ಅತೃಪ್ತರೆಲ್ಲರನ್ನೂ ಸಮಾಧಾನಪಡಿಸಿದೆ. ಅದರಲ್ಲೂ ಸಂಘದ ಕಾರ್ಯಕರ್ತರು ಬ್ರಿಜೇಶ್ ಚೌಟರ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಈ ವಿಚಾರದಲ್ಲಿ ಬಂಟ್ವಾಳದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ರಣತಂತ್ರದ ಕೇಂದ್ರಬಿಂದುವಾಯಿತು.
ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಚುನಾವಣಾ ಪ್ರಚಾರ ಸಭೆ ಹಾಗೂ ಕಾವಳಪಡೂರು ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆ ಶಿವಾನಂದ ಪೂಜಾರಿ ಮಾವಿನಕಟ್ಟೆ ಅವರ ಮನೆಯಲ್ಲಿ ನಡೆಯಿತು. ಬಿಜೆಪಿ ಸೇನಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಕೂಡಲೇ ಬಿಜೆಪಿಯ ಗೆಲುವು ನಿಶ್ಚಿತವಾಗಿದೆ,ಆದರೆ ಕಾರ್ಯಕರ್ತರು ಒಂದಾಗಿ ಗೆಲುವಿನ ಅಂತರವನ್ನು ಜಾಸ್ತಿ ಮಾಡುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಹಿರಿಯರು ನನ್ನ ಮೇಲೆ ನಂಬಿಕೆಯಿಟ್ಟು ನೀಡಿದ ಜವಾಬ್ದಾರಿಯನ್ನು ನಿರ್ವಹಣೆ ಮಾಡುವ ಶಕ್ತಿ ದೇವರು ನೀಡಲಿ, ನಿಮ್ಮೆಲ್ಲರ ಪ್ರೀತಿ ವಿಶ್ವಾಸವನ್ನು ಉಳಿಸಿಕೊಂಡು ಗೌರವ ತರುವ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಂಘಟನೆಯ ಆಧಾರದಲ್ಲಿ ಬೆಳೆದ ಪಕ್ಷವನ್ನು ಇನ್ನಷ್ಟು ಶಕ್ತಿಯುತವಾಗಿ ಬೆಳೆಸುತ್ತೇನೆ ಎಂದು ಬ್ರಿಜೇಶ್ ಚೌಟ ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲಿ ಅನೇಕ ಜನಪರವಾದ ಯೋಜನೆಯ ಅನುಷ್ಠಾನವಾಗಿದ್ದು, ಯೋಜನೆಯ ಫಲಾನುಭವಿಗಳ ಜೊತೆ ಕಾರ್ಯಕರ್ತರು ಸಂವಾದ ನಡೆಸುವ ಕಾರ್ಯ ಆಗಬೇಕು ಎಂದು ಪ್ರತಿಪಾದಿಸಿದ ಅವರು, ಎಲ್ಲರ ಅಭಿಪ್ರಾಯ ಪಡೆದು, ಎಲ್ಲರ ಸಲಹೆ ಪಡೆದು,ಪಕ್ಷವನ್ನು ಸಂಘಟನಾತ್ಮಕ ಶಕ್ತಿ ನೀಡುವ ಮತ್ತು ಪ್ರಾಮಾಣಿಕವಾಗಿ ಅಭಿವೃದ್ಧಿಯನ್ನು ಮಾಡುತ್ತೇನೆ. ಕಾರ್ಯಕರ್ತರ ಶಕ್ತಿಯನ್ನು ನಂಬಿರುವ ನಾನು ಅವರ ಭಾವನೆಗಳಿಗೆ ಸದಾ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಬಿಜೆಪಿ ಪ್ರಮುಖರಾದ ದೇವಪ್ಪ ಪೂಜಾರಿ, ಸುಲೋಚನ ಜಿ.ಕೆ.ಭಟ್, ಪೂಜಾ ಪೈ,ಜಗದೀಶ್ ಶೇಣವ, ದಿನೇಶ್ ಅಮ್ಟೂರು, ಸಂದೇಶ್ ಶೆಟ್ಟಿ, ವಿಕಾಶ್ ಪುತ್ತೂರು, ದೇವದಾಸ್ ಶೆಟ್ಟಿ,ದೇವಪ್ಪ ಪೂಜಾರಿ, ಪ್ರಭಾಕರ್ ಪ್ರಭು, ರಾಮ್ ದಾಸ್ ಬಂಟ್ವಾಳ,ಮೋನಪ್ಪ ದೇವಸ್ಯ, ಶೇಖರ್ ಶೆಟ್ಟಿ, ಸಂತೋಷ್ ಕುಮಾರ್ ರಾಯಿ ಬೆಟ್ಟು, ರಾಜೀವಿ, ದಿನೇಶ್ ಅಮ್ಟೂರು, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು ಸೇರಿದಂತೆ ಬಿಜೆಪಿ ನಾಯಕರನೇಕರು ಉಪಸ್ಥಿತರಿದ್ದರು.