ಬೆಂಗಳೂರು: ಬಹುತೇಕ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗಿದ್ದರೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಯಾರೆಂಬ ಬಗ್ಗೆ ಹೈಕಮಾಂಡ್ ತಿಳಿಸಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿ ಘೋಷಣೆ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್‌ಗಳು ಕುತೂಹಲದ ಕೇಂದ್ರಬಿಂದುವಾಗಿವೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್ ಪರ ಅಭಿನಂದನೆಗಳ ಪೋಸ್ಟರ್ ವೈರಲ್ ಆಗುತಿದ್ದು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಎಂದು ಕಮಲ ಕಾರ್ಯಕರ್ತರೇ ಹೇಳಿಕೊಳ್ಳುತ್ತಿದ್ದಾರೆ. ಪೋಸ್ಟರ್‌ನಲ್ಲಿ ಸುಧಾಕರ್ ಫೋಟೋ ಜೊತೆಗೆ ಸಂಸದ ಪಿಸಿ ಮೋಹನ್,ಮುಖಂಡರುಗಳಾದ ಕೆ.ವಿ.ನಾಗರಾಜ್,ಕೆ.ವಿ.ನವೀನ್ ಕಿರಣ್, ಡಾ.ಮಂಜುನಾಥ್, ಇತರ ಮುಖಂಡರ ಬಾವಚಿತ್ರಗಳು ಇವೆ. ‘ಡಾ ಕೆ.ಸುಧಾಕರ್ ಗೆ ಬಿಜೆಪಿ ಟಿಕೇಟ್ ಘೋಷಣೆಯಾಗಿದ್ದಕ್ಕೆ ಅಭಿನಂದನೆಗಳು’ ಎನ್ನುವ ಪೋಷ್ಟರ್ ಬಗ್ಗೆ ಕ್ಷೇತ್ರದಲ್ಲೀಗ ಭಾರೀ ಚರ್ಚ
ನಡೆದಿದೆ.
ಮಾಜಿ ಸಚಿವ ಡಾ ಕೆ ಸುಧಾಕರ್ ಬೆಂಬಲಿಸಿ ಹರಿದಾಡುತ್ತಿರುವ ಈ ಪೋಸ್ಟರ್‌ಗಳು ಹಲವಾರು ಲೆಕ್ಕಾಚಾರಗಳಿಗೂ ಕಾರಣವಾಗಿವೆ. ಚಿಕ್ಕಬಳ್ಳಾಪುರದ ಡಾ ಕೆ.ಸುಧಾಕರ್ ಅಭಿಮಾನಿಗಳ ಈ ನಡೆ ಬಗ್ಗೆ ಅವರದೆ ಪಕ್ಷದಲ್ಲಿರುವ ಮಂದಿ ಬಿಜೆಪಿ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗುತ್ತಿದೆ. ಅಧಿಕೃತವಾಗಿ ಟಿಕೆಟ್ ಘೋಷಣೆಗೆ ಮುನ್ನವೇ ಈ ರೀತಿ ಪ್ರಚಾರ ಕೈಗೊಂಡರೆ ಟಿಕೆಟ್ ಆಕಾಂಕ್ಷಿಗಳು ಬಂಡಾಯವೇಳುವ ಸಾಧ್ಯತೆಗಳ ಬಗ್ಗೆ ಆತಂಕ ಎದುರಾಗಿದೆ ಎಂದು ನಾಯಕರು ಹೇಳಿಕೊಂಡಿದ್ದಾರೆ.