ಕರ್ನಾಟಕದಲ್ಲಿ ಕಾಂಗ್ರೆಸ್‌ನ ಕುಟುಂಬ ರಾಜಕಾರಣ ಹೇಗಿದೆ ಗೊತ್ತಾ? ಒಟ್ಟು ಕ್ಷೇತ್ರಗಳು 28, ಕುಟುಂಬ ಸದಸ್ಯರೇ ಸ್ಪರ್ಧಿಸುತ್ತಿರುವುದು 14 ಕಡೆ..!
ಬೆಂಗಳೂರು: ವಂಶ ಪಾರಂಪರ್ಯ ಆಡಳಿತದ ಮೂಲಕ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಿದೆ. ಈಗಾಗಲೇ ಖರ್ಗೆ-ಪ್ರಿಯಾಂಕ್, ಶಾಮನೂರು-ಮಲ್ಲಿಕಾರ್ಜುನ್, ಸಿದ್ದರಾಮಯ್ಯ-ಯತೀಂದ್ರ ಸಹಿತ ಅನೇಕರು ಅಪ್ಪ ಮಕ್ಕಳು ಶಾಸಕರು ಸಂಸದರಿದ್ದಾರೆ. ಇದೀಗ ಲೋಕಸಭಾ ರಣಾಂಗಣಕ್ಕೆ ಇಳಿಯುವ ಮೂಲಕ ಮತ್ತಷ್ಟು ಮಂದಿ ಕಾಂಗ್ರೆಸ್‌ನ ಕುಟುಂಬ ರಾಜಕಾರಣಕ್ಕೆ ಸಾಕ್ಷಿಯಾಗಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕಡೆ ಕಾಂಗ್ರೆಸ್ ನಾಯಕರ ಕುಟುಂಬ ಸದಸ್ಯರಿಗೆ ಟಿಕೆಟ್ ಮಾಡಲಾಗಿದೆ. ಹೈಕಮಾಂಡ್‌ನ ಈ ನಡೆ ಕಾಂಗ್ರೆಸ್ ಪಕ್ಷದ ನಾಯಕ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆಶಿ ಅವರು ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಲಬರುಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಸದಸ್ಯರಾಗಿದ್ದು, ಅವರ ಪುತ್ರ ರಾಜ್ಯದಲ್ಲಿ ಸಚಿವರಾಗಿದ್ದಾರೆ. ಇದೀಗ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಮನಿ ಅವರಿಗೆ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ: ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಇದೀಗ ಮತ್ತೊಮ್ಮೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ದಾವಣಗೆರೆ: ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಇದೀಗ ಸಚಿವರು. ಈಗ ಸಚಿವರ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ.
ಚಿಕ್ಕೋಡಿ: ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಈ ಬಾರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸತೀಶ್ ಜಾರಕಿಹೊಳಿ ಸಹೋದರರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಎಲ್ಲರೂ ಶಾಸಕರಾಗಿದ್ದಾರೆ. ಬೇರೆ ಬೇರೆ ಪಕ್ಷವಾದರೂ ಬಹುತೇಕ ಮಂದಿ ಶಾಸಕರಾಗಿದ್ದಾರೆ.
ಬೀದರ್: ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆಗೆ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ.
ಬೆಂಗಳೂರು ದಕ್ಷಿಣ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಪ್ರಕಟಿಸಲಾಗಿದೆ.
ಬೆಳಗಾವಿ: ಸಚಿವೆ ಲಕ್ಷ್ಷ್ಮಿ ಹೆಬ್ಟಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಈಗಾಗಲೇ ವಿಧಾನ ಪರಿಷತ್ ಸದಸ್ಯ. ಇದೀಗ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ.
ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ ಹಿಟ್ನಾಳ್‌ಗೆ ಕೊಪ್ಪಳದಿಂದ ಸ್ಪರ್ಧೆಗೆ ಟಿಕೆಟ್ ಪಡೆದಿದ್ದಾರೆ.
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಈಗ ಸಚಿವರಾಗಿದ್ದಾರೆ. ಇದೀಗ ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ ಅವರು ಶಿವಮೊಗ್ಗ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಬಾಗಲಕೋಟೆ: ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಬಾಗಲಕೋಟೆ ಕ್ಷೇತ್ರದ ‘ಕೈ’ ಅಭ್ಯರ್ಥಿ.
ಹಾಸನ: ಮಾಜಿ ಸಚಿವ ದಿ. ಪುಟ್ಟಸ್ವಾಮಿ ಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಅವರಿಗೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪ್ರಕಟಿಸಲಾಗಿದೆ.
ಬೆಂಗಳೂರು ಕೇಂದ್ರ: ಮಾಜಿ ಸಚಿವ ರೆಹಮಾನ್ ಖಾನ್ ಪುತ್ರ ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿಖಾನ್ ಈ ಬಾರಿ ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ.
ಬೆಂಗಳೂರು ಉತ್ತರ: ವಿಧಾನಸಭೆಯ ಮಾಜಿ ಸ್ಪೀಕರ್ ಆಗಿದ್ದ ಎಂ.ವಿ.ವೆಂಕಟಪ್ಪ ಪುತ್ರ ಪ್ರೊ| ರಾಜೀವ್ ಗೌಡ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.
ಹಾವೇರಿ: ಮಾಜಿ ಶಾಸಕ ಎಸ್.ಎಸ್. ಗಡ್ಡದೇವರ ಮಠ ಅವರ ಪುತ್ರ ಆನಂದ ಗಡ್ಡದೇವರ ಮಠ ಹಾವೇರಿ ಕ್ಷೇತ್ರದ ಹುರಿಯಾಳು.