ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ಇದೀಗ ಲೋಕಸಭಾ ಸಮರದಲ್ಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಿದೆ.
ಈಗಾಗಲೇ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿರುವ ಕಾಂಗ್ರೆಸ್ ಬಹಿರಂಗ ಚುನಾವಣಾ ಪ್ರಚಾರಕ್ಕೆ ಮುನ್ನುಡಿ ಬರೆಯಲು ತಯಾರಿ ನಡೆಸಿದೆ. ಶರಣರ ನಾಡು ಬಸವ ಕಲ್ಯಾಣದಿಂದ ಈ ತಿಂಗಳ 29ರಂದು ರಣಕಹಳೆ ಮೊಳಗಿಸಲು ತಯಾರಿ ನಡೆದಿದೆ.
ಬಸವಕಲ್ಯಾಣದಿಂದ ಯಾತ್ರೆ, ಬಹಿರಂಗ ಸಮಾವೇಶಗಳನ್ನು ನಡೆಸುತ್ತಾ ಈ ಪ್ರಚಾರ ಯಾತ್ರೆಯನ್ನು ಶಿವಮೊಗ್ಗ ವರೆಗೂ ನಡೆಸಲು ನಾಯಕರು ತೀರ್ಮಾನಿಸಿದ್ದಾರೆ. ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
























































