ಬೆಂಗಳೂರು: ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಇದೀಗ ಪಕ್ಷದ ನಾಯಕರಿಗೆ ಹುದ್ದೆ ಕೊಟ್ಟು ಉತ್ತೇಜನ ನೀಡುವ ಪ್ರಕ್ರಿಯೆ ಬಿರುಸುಗೊಳಿಸಿದೆ. ತೀವ್ರ ಕುತೂಹಲ ಕೆರಳಿಸಿರುವ ನಿಗಮ ಮಂಡಳಿ ನೇಮಕ ಸಂಬಂಧದ ಪಟ್ಟಿಗೆ ಸಿಎಂ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ.
44 ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದಿಸಿದ್ದಾರೆ. ನಿಗಮ-ಮಂಡಳಿಗಳಿಗೆ ನೇಮಕವಾದವರಿಗೆ ಶೀಘ್ರವೇ ನೇಮಕ ಆದೇಶ ರವಾನೆಯಾಗಲಿದೆ ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಈ ನಡುವೆ, ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಮಿತಿಗೆ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಮೆಹರೋಜ್ ಖಾನ್, ಡಾ.ಪುಷ್ಪಾ ಅಮರನಾಥ್, ಎಸ್.ಆರ್.ಪಾಟೀಲ್, ಸೂರಜ್ ಹೆಗ್ಡೆ ಅವರನ್ನು ನೇಮಕ ಮಾಡಲಾಗಿದ್ದು ಇವರಿಗೆ ಸಂಪುಟ ದರ್ಜೆ ಸ್ಥಾನಮಾನ ಸಿಗಲಿದೆ.