ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ರೈತನಿಗೆ ನಿರಾಕರಿಸಲಾಗಿದೆ ಎಂಬ ಪ್ರಕರಣದಲ್ಲಿ ಇದೀಗ ರಾಜ್ಯ ಸರ್ಕಾರಕ್ಕೆ ಮುಜುಗರದ ಪರಿಸ್ಥಿತಿ ಎದುರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜ್ಯ ಸರ್ಕಾರ ಮತ್ತು ಬಿಎಮ್ಆರ್ಸಿಎಲ್ಗೆ ನೋಟಿಸ್ ನೀಡಿದೆ.
ಕಳೆದ ಸೋಮವಾರ ಬಟ್ಟೆ ಗಲೀಜು ಎಂಬ ಕಾರಣಕ್ಕೆ ರೈತನಿಗೆ ಮೆಟ್ರೋ ರೈಲು ಪ್ರವೇಶಕ್ಕೆ ಸಿಬ್ಬಂದಿ ತಡೆಯೊಡ್ಡಿದ್ದ ಪ್ರಸಂಗ ನಡೆದಿತ್ತು. ಈ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಸಿಬ್ಬಂದಿಯನ್ನು ಮೆಟ್ರೋ ಸಂಸ್ಥೆ ಸೇವೆಯಿಂದ ವಜಾ ಮಾಡಿತ್ತು.
ಇದೀಗ ಈ ಪ್ರಕರಣ ಕುರಿತಂತೆ ರಾಜ್ಯ ಸರ್ಕಾರ ಮತ್ತು ಬಿಎಮ್ಆರ್ಸಿಎಲ್ಗೆ ನೋಟಿಸ್ ನೀಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ವ್ಯಕ್ತಿಯ ಬಟ್ಟೆಯ ಆಧಾರದ ಮೇಲೆ ಸಾರ್ವಜನಿಕ ಸಾರಿಗೆಯಲ್ಲಿ ಅವಕಾಶ ನಿರಾಕರಣೆ ಮಾಡುವಂತಿಲ್ಲ. ಆ ರೀತಿಯಾದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.