ಬೆಂಗಳೂರು: ಜಾತಿ ಸಮುದಾಯಗಳ ನಿಗಮಗಳ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತಾರತಮ್ಯ ಮಾಡಿದೆ ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಗುರುವಾರ ಈ ವಿಚಾರ ಕುರಿತಂತೆ ಅರವಿಂದ ಬೆಲ್ಲದ್ ಎತ್ತಿರುವ ಧ್ವನಿ ಗಮನಸೆಳೆದಿದೆ. ವಿವಿಧ ಜಾತಿಯ ನಿಗಮಗಳಿಗೆ ಹಣ ಕಡಿತಗೊಳಿಸಿ ಅಲ್ಪಸಂಖ್ಯಾತರಿಗೆ ಹಂಚಿಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ತಾವು ಮತ್ತು ತಮ್ಮ ಸರ್ಕಾರ ಹಿಂದುಳಿದ ವರ್ಗಗಳ ಹಾಗೂ ದಲಿತರ ಪರ ಎಂದು ಹೇಳುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಅವರು ವಾಸ್ತವದಲ್ಲಿ ಈ ಸಮುದಾಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಬೊಟ್ಟು ಮಾಡಿದರು.
ಹಿಂದಿನ ಬೊಮ್ಮಾಯಿ ಸರ್ಕಾರದ ಬಜೆಟ್’ಗೆ ಹೋಲಿಸಿದರೆ ಈಗಿನ, ಸಿದ್ದರಾಮಯ್ಯ ಅವರ ಬಜೆಟ್ ಹಿಂದುಳಿದ ಸಮುದಾಯಗಳಿಗೆ ಹಂಚಿರುವ ಬಜೆಟ್ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ವಿಶ್ಲೇಷಿಸಿದ ಬೆಲ್ಲದ್, ಬೊಮ್ಮಾಯಿ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 60 ಕೋಟಿ ರೂಪಾಯಿ ಮಂಜೂರು ಮಾಡಿದ್ದರೆ, ಸಿದ್ದರಾಮಯ್ಯ ಅವರು 40 ಕೋಟಿ ರೂಪಾಯಿಗೆ ಇಳಿಸಿದ್ದಾರೆ. ತಾಂಡಾ ಅಭಿವೃದ್ಧಿ ನಿಗಮಕ್ಕೆ ಹಿಂದಿನ ಸರ್ಕಾರ 100 ಕೋಟಿ ಮೀಸಲಿಟ್ಟರೇ, ಸಿದ್ದರಾಮಯ್ಯ ಅವರು 60 ಕೋಟಿ ರೂಪಾಯಿಗೆ ಇಳಿಸಿದ್ದಾರೆ. ಆದಿ ಜಾಂಬವ ನಿಗಮಕ್ಕೆ ಹಿಂದಿನ ಸರ್ಕಾರ 110 ಕೋಟಿ ನೀಡಿದ್ದರೆ, ಈಗಿನ ಸರ್ಕಾರ ಕೇವಲ 60 ಕೋಟಿ ರೂಪಾಯಿ ಹಂಚಿಕೆ ಮಾಡಿದೆ ಎಂದು ಪಟ್ಟಿ ಒದಗಿಸಿದರು.
ಈ ಅನುದಾನ ಕಡಿತವು ಲಿಂಗಾಯತ, ಕುರುಬ, ವಿಶ್ವಕರ್ಮ ಸಹಿತ ವಿವಿಧ ವರ್ಗಗಳ ನಿಗಮಗಳಿಗೆ ಮಾಡಲಾಗಿದ್ದು, ಈ ನಿಗಮಗಳಿಗೆ ಹಣ ಕಡಿತಗೊಳಿಸಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 3000 ಕೋಟಿ ರೂಪಾಯಿ ನೀಡಲಾಗಿದೆ ಎಂದು ಅರವಿಂದ್ ಬೆಲ್ಲದ್ ಅವರು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಈ ನಡುವೆ, ನಾನು ಅಲ್ಪಸಂಖ್ಯಾತರಿಗೆ ಹಣ ಮಂಜೂರು ಮಾಡುವುದನ್ನು ವಿರೋಧಿಸುವುದಿಲ್ಲ, ಆದರೆ ಹಿಂದುಳಿದ ವರ್ಗಗಳ ಹಣವನ್ನು ಏಕೆ ಕಡಿತಗೊಳಿಸಿದ್ದೀರಿ ಎಂದು ಅರವಿಂದ್ ಬೆಲ್ಲದ್ ಪ್ರಶ್ನಿಸಿದ್ದಾರೆ.
.






















































