ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯಲ್ಲಿ ಭಾರೀ ಪರಿವರ್ತನೆಗೆ ಮುನ್ನುಡಿ ಬರೆಯಲಾಗಿದ್ದು ಧಾರ್ಮಿಕ ಕ್ಷೇತ್ರದಲ್ಲಿ ಅಭಿವೃದ್ಧಿಯ ಶಕೆ ಆರಂಭವಾಗಿದೆ ಎಂಬುದು ಪಂಡಿತರ ಮಾತುಗಳು. ಅದರಲ್ಲೂ ರಾಜ್ಯದ ಇತಿಹಾಸದಲ್ಲೇ ಮುಜರಾಯಿ ದೇವಾಲಯಗಳ ಸಿಬ್ಬಂದಿ ಸಮೂಹಕ್ಕೆ ಸೌಲಭ್ಯಗಳು ಸಿಕ್ಕಿದ್ದು ಇದರಿಂದಾಗಿ ಅರ್ಚಕರ ಸಮೂಹ ಎಂದಿಲ್ಲದ ಖುಷಿಯಲ್ಲಿದೆ.
ತಮಗೆ ಚಾರಿತ್ರಿಕ ಕೊಡುಗೆಗಳನ್ನು ಕಲ್ಪಿಸಿರುವ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಅಭಿನಂಧಿಸಿರುವ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಸಂಘ, ಸಚಿವರನ್ನು ‘ರಾಜ್ಯದ ದೇವಾಲಯಗಳ ಅರ್ಚಕರು-ನೌಕರರು ಕಂಡ ಅಪ್ರತಿಮ ಅಮೋಘ ಆದೇಶಗಳ ಸರದಾರ’ ಎಂದು ಬಣ್ಣಿಸಿದೆ.
ಈ ಕುರಿತಂತೆ ಮುಜರಾಯಿ ಸಚಿವರಿಗೆ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ಅಧ್ಯಕ್ಷ ಶ್ರೀವತ್ಸ ಅವರು ರವಾನಿಸಿರುವ ಅಭಿನಂದನಾ ಸಂದೇಶ ಗಮನಸೆಳೆದಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿನ ದೇವಾಲಯ ಹಾಗೂ ದೇಗುಲಗಳ ಸಿಬ್ಬಂದಿಯ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಪ್ರಕಟಿಸಿರುವ ಸಚಿವ ರಾಮಲಿಂಗ ರೆಡ್ಡಿ ಅವರನ್ನು ‘ಅರ್ಚಕರ ಕಣ್ಮಣಿ’ ಎಂದು ಅರ್ಚಕರ ಸಂಘದ ಅಧ್ಯಕ್ಷರು ಕೊಂಡಾಡಿದ್ದಾರೆ.
ಮುಜರಾಯಿ ದೇವಾಲಯಗಳ ಸಿಬ್ಬಂದಿ ಕುಟುಂಬ ಸಮೇತ ಕೈಗೊಂಡ ಕ್ಷೇತ್ರ ಯಾತ್ರೆ ಬಗ್ಗೆ ಫೋಟೋಗಳ ಸಹಿತ ಸಚಿವರಿಗೆ ಅವರು ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ. ರಾಜ್ಯ ಮುಜರಾಯಿ ಇತಿಹಾಸದಲ್ಲೆ ಪ್ರಥಮ ಬಾರಿಗೆ ರಾಜ್ಯ ಮುಜರಾಯಿ ‘ಸಿ’ ವರ್ಗಗಳ ಅರ್ಚಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಪತ್ನಿ ಸಮೇತ ಉಚಿತವಾಗಿ ದಕ್ಷಿಣ ಭಾರತದ ಯಾತ್ರೆಗೆ ಕಳುಹಿಸಿರುವ ಸಚಿವರು ಅಜಾತಶತ್ರು. ಅಷ್ಟೇ ಅಲ್ಲ ಅವರು ಮುಜರಾಯಿ ಇಲಾಖೆ ಅರ್ಚಕರು ನೌಕರರು ಕಂಡ ಅಪ್ರತಿಮ ಅಮೋಘ ಆದೇಶಗಳ ಸರದಾರ ಎಂದು ಹೇಳಿದ್ದಾರೆ. ಅರ್ಚಕರು ಮತ್ತು ಕುಟುಂಬದವರು ಕಷ್ಟ ದುಖಃಗಳನ್ನು ಮರೆತು ಲವಲವಿಕೆಯಿಂದ ಇದ್ದರೆ ಅದಕ್ಕೆ ಮುಜರಾಯಿ ಸಚಿವರು ಹಾಗೂ ಮುಜರಾಯಿ ಆಯುಕ್ತರು ಕಾರಣ ಎಂದು ಬಣ್ಣಿಸಿದ್ದಾರೆ.
ಇದೇ ವೇಳೆ, ಅರ್ಚಕರ ಸಮಸ್ಯೆಗಳ, ಕಷ್ಟ ದುಮ್ಮಾನಗಳನ್ನು ಬಗೆಹರಿಸಲು ರಾಮಲಿಂಗರೆಡ್ಡಿಯವರಿಗೆ ಹಾಗೂ ಮುಜರಾಯಿ ಇಲಾಖೆಯ ಆಯುಕ್ತರಿಗೆ ಭಗವತಿ ದೇವಿ ಮೀನಾಕ್ಷಿಮಾತೆ ರಾಮೇಶ್ವರಸ್ವಮಿ ಅನಂತಪದ್ಮನಾಭ ಸ್ವಾಮಿ ದೇವರುಗಳು ಹೆಚ್ಚಿನ ಶಕ್ತಿ, ಆಯುಷ್ಯ, ಆರೋಗ್ಯ ಕೊಟ್ಟು ಉನ್ನತ ಅದಿಕಾರ ಕೊಟ್ಟು ಕಾಪಾಡಲಿ ಎಂದು ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ರಾಜ್ಯಾದ್ಯಕ್ಷರು ಮತ್ತು ಪದಾದಿಕಾರಿಗಳು ಹಾರೈಸಿದ್ದಾರೆ.


























































