ಬೆಂಗಳೂರು : ರಾಜ್ಯ ಸರ್ಕಾರ ರಾಮ ಮತ್ತು ಹನುಮ ಭಕ್ತರ ವಿರುದ್ಧ ಏಕಪಕ್ಷೀಯವಾಗಿ ವರ್ತಿಸಿ ಹತ್ತಿಕ್ಕುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಸರ್ಕಾರದ ಈ ಧೋರಣೆಯನ್ನು ತಾವು ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ.
ಮಂಡ್ಯ ಪೊಲೀಸರು ಕೆರೆಗೋಡು ಪ್ರತಿಭಟನೆ ಸಂದರ್ಭದಲ್ಲಿ ಅವರನ್ನು ಬಂಧಿಸಿ ಮಂಡ್ಯ ನಗರದಲ್ಲಿ ಬಿಡುಗಡೆ ಮಾಡಿದ ಬಳಿಕ ನಗರಕ್ಕೆ ಹಿಂತಿರುಗಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಸರ್ಕಾರದ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆರಗೋಡು ಗ್ರಾಮದಲ್ಲಿ ಮೂರು ತಿಂಗಳ ಮೊದಲೇ ಹನುಮ ಧ್ವಜ ಹಾರಿಸಲು ಸ್ಥಳೀಯ ರಾಮಸೇವಾ ಮಂಡಳಿ ಸ್ಥಳೀಯ ಪಂಚಾಯತಿ ಅನುಮತಿ ಪಡೆದುಕೊಂಡಿದೆ. ಬಳಿಕ ಸ್ವಂತ ಖರ್ಚಿನಲ್ಲಿ ಬೃಹತ್ ಕಂಬ ಸ್ಥಾಪಿಸಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ದಿನದಂದು ಹನುಮಧ್ವಜ ಹಾರಿಸಿದ್ದಾರೆ. ಇದು ದೇವಾಲಯದ ಮುಂಭಾಗದಲ್ಲಿ ಹಾರಿಸಲಾಗಿದೆ. ಇದರಿಂದ ಯಾರಿಗೂ ತೊಂದರೆ ಆಗುತ್ತಿರಲಿಲ್ಲ ಎಂದು ಅಲ್ಲಿನ ಬೆಳವಣಿಗೆಗಳನ್ನು ವಿವರಿಸಿದರು.
ಅಂದಿನಿಂದಲೂ ಹನುಮಧ್ವಜ ಹಾರಾಡುತ್ತಿತ್ತು. ಹೀಗಿರುವಾಗ ಇಂದು ಏಕಾಏಕಿ ಪೊಲೀಸರು ಗ್ರಾಮಕ್ಕೆ ಧಾವಿಸಿ ಹನುಮಧ್ವಜ ಇಳಿಸಿ ಮಧ್ಯಾಹ್ನ 3 ಗಂಟೆ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದಾರೆ. ಇದು ಆ ಗ್ರಾಮದ ಜನರ ಭಾವನೆಗಳಿಗೆ ವಿರುದ್ಧವಾಗಿ ಪೊಲೀಸರು ವರ್ತಿಸಿದ್ದಾರೆ. ಅವರ ವರ್ತನೆ ವಿರುದ್ಧ ಪ್ರತಿಭಟನೆ ನಡೆಸಿದ ಗ್ರಾಮಸ್ಥರ ವಿರುದ್ಧ ಪೋಲಿಸರು ಲಾಠಿಚಾಜ್೯ ಮಾಡಿ ದೌರ್ಜನ್ಯ ಮೆರೆದಿದ್ದಾರೆ. ಇದೊಂದು ಗೂಂಡಾ ವರ್ತನೆ ಎಂದು ಆರೋಪಿಸಿದ್ದಾರೆ.
ಒಂದು ವೇಳೆ ಪೊಲೀಸರಿಗೆ ಗ್ರಾಮದಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂಬ ಉದ್ದೇಶ ಇದ್ದಿದ್ದರೆ ಅವರು ಸರಕಾರದ ವೆಚ್ಚದಲ್ಲಿ ಕಂಬ ಸ್ಥಾಪಿಸಿ ಹಾರಿಸಬಹುದಿತ್ತು. ಕಾನೂನು ಬಾಹಿರವಾಗಿ ರಾಮ ಸೇವಾ ಮಂಡಳಿ ಅವರು ಅನುಮತಿ ಪಡೆದು ಹಾರಿಸಿದ್ದ ಹನುಮ ಧ್ವಜವನ್ನು ಇಳಿಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.
ಹನುಮ ಧ್ವಜ ಇಳಿಸಿದ ಘಟನೆ ಖಂಡಿಸಿ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ನನ್ನನ್ನು ಬಂಧಿಸಿ ಕೇಸು ದಾಖಲಿಸುವ ಮೂಲಕ ಸರ್ಕಾರ ತನ್ನ ಹಿಂದೂ ವಿರೋಧಿ ಧೋರಣೆಯನ್ನು ಮುಂದುವರಿಸಿದೆ ಎಂದು ಅಶೋಕ್ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಅಯೋಧ್ಯಾ ರಾಮಜನ್ಮಭೂಮಿ ಚಳುವಳಿಯ ಕರಸೇವಕರ ಬಂಧನ ವಿರೋಧಿಸಿ ಪ್ರತಿಭಟಿಸಿದಾಗ, ನಂತರ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಸಹ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ನನ್ನನ್ನು ಬಂಧಿಸಿತ್ತು. ಒಂದೇ ತಿಂಗಳಲ್ಲಿ ಮೂರು ಬಾರಿ ವಿಪಕ್ಷ ನಾಯಕನನ್ನ ಬಂಧನ ಮಾಡಿರುವುದು ಬಹುಶಃ ರಾಜ್ಯದ ಇತಿಹಾಸದಲ್ಲೇ ಇದೆ ಮೊದಲು ಅನ್ನಿಸುತ್ತೆ. ರಾಜ್ಯದಲ್ಲಿ ಅಕ್ಷರಶಃ ತುರ್ತು ಪರಿಸ್ಥಿತಿಯ ವಾತಾವರಣವಿದೆ ಎಂದೂ ಟೀಕಿಸಿದರು.
ಸಿಎಂ ಅವರೇ, ನಾವು ಹನುಮನ ಭಕ್ತರು. ನಿಮ್ಮ ಈ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ, ಜಗ್ಗುವುದೂ ಇಲ್ಲ. ರಾಮ ಎಲ್ಲಿರುತ್ತಾನೋ ಅಲ್ಲಿ ಆಂಜನೇಯ ಇರುವಂತೆ, ಹಿಂದೂ ಧರ್ಮದ ಮೇಲೆ, ಹಿಂದೂಗಳ ಎಲ್ಲೇ ದೌರ್ಜನ್ಯ ನಡೆದರೂ ಅಲ್ಲಿ ಹಿಂದೂಗಳ ರಕ್ಷಣೆಗೆ ನಾವು ಇರುತ್ತೇವೆ ಎಂದರು.
ಕೇಸರಿ ಬಣ್ಣ, ಹನುಮನ ಧ್ವಜ ನಿಮಗೆ ಸಹಿಸಲು ಆಗದಿದ್ದರೆ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿ, ಗೋಲಿ ಬಾರ್ ಮಾಡಿ, ಸುಳ್ಳು ಕೇಸು ಖಾಕಿ ಬಂಧಿಸಿ, ಆದರೆ ನಾವು ಹಿಂದೂಗಳ ರಕ್ಷಣೆ ಮಾಡಿಯೇ ಸಿದ್ಧ. ನಿಮ್ಮ ಹಿಂದೂ ದ್ವೇಷ ದೊಡ್ಡದೋ ನಮ್ಮ ಹನುಮ ಭಕ್ತಿ ದೊಡ್ಡದೋ ನೋಡಿಯೇ ಬಿಡೋಣ ಎಂದೂ ಅವರು ಸವಾಲು ಹಾಕಿದ್ದಾರೆ.


























































