ಬೆಂಗಳೂರು:ಕಲಬುರಗಿ ಜಿಲ್ಲೆ ಚಿಂಚೋಳಿ ಸಮೀಪದ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಇರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಶುಗರ್ ಫ್ಯಾಕ್ಟರಿ ಮುಚ್ಚಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ. ಶುಗರ್ ಫ್ಯಾಕ್ಟರಿ ಮತ್ತು ಏಥೆನಾಲ್ ಘಟಕದ ಕಲುಷಿತ ನೀರು ಮುಲ್ಲಾಮಾರಿ ಜಲಾಶಯಕ್ಕೆ ಬೀಡಲಾಗುತ್ತಿತ್ತು ಎಂಬ ಆರೋಪ ಇದೆ. ಜೊತೆಗೆ ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪ ಹಿನ್ನಲೆ ಫ್ಯಾಕ್ಟರಿಗೆ ನೀಡಿರುವ ವಿದ್ಯುತ್, ನೀರಿನ ಸಂರ್ಪಕ ಕಡಿತಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ ಎನ್ನಲಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಎದುರಿಸಲಾಗದೆ ನಮ್ಮ ಎಥನಾಲ್ ಕಾರ್ಖಾನೆಗೆ ನೋಟಿಸ್ ಕೊಡಿಸಿದೆ ಎಂದು ದೂರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರೈತರಿಗೆ ನೆರವಾಗಲು ಹಾಗು ಹಿಂದುಳಿದ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಸ್ಥಾಪಿಸಲಾಗಿದೆ. ಕಾನೂನು ರೀತ್ಯಾ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಾಗುತ್ತದೆ. ಈ ನೋಟಿಸ್, ಆದೇಶಗಳಿಗೆ ಹೆದರುವ ಜಾಯಮಾನ ನನ್ನದಲ್ಲ ಕಾಂಗ್ರೆಸ್ ಆಡಳಿತದ ವಿರುದ್ಧ ಹೋರಾಟ ಮಾಡಲು ಶಕ್ತಿ ಇಮ್ಮಡಿಯಾಗಿದೆ ಎಂದಿದ್ದಾರೆ.
























































