ಬೆಂಗಳೂರು: ‘ಪದ್ಮ’ ಪ್ರಶಸ್ತಿಗೆ ಆಯ್ಕೆಯಾಗಿರುವ ಎಲೆಮರೆಯ ಕಾಯಿಯಂತಿರುವ ರಾಜ್ಯದ ಎಲ್ಲ ಸಾಧಕರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅಭಿನಂದಿಸಿದ್ದಾರೆ.
ವಿಶಿಷ್ಟ ಸಾಧನೆ ಮಾಡಿದ ಕರ್ನಾಟಕದ ಮೈಸೂರಿನ ಬುಡಕಟ್ಟು ಕಲ್ಯಾಣಕ್ಕೆ ಶ್ರಮಿಸಿದ ಕಾರ್ಯಕರ್ತ ಸೋಮಣ್ಣ, ಪ್ಲಾಸ್ಟಿಕ್ ಸರ್ಜನ್ ಮತ್ತು ಸಾಮಾಜಿಕ ಕಾರ್ಯಕರ್ತೆ ಪ್ರೇಮಾ ಧನರಾಜ್ ಅವರು ಪದ್ಮಶ್ರೀ ವಿಜೇತರಾಗಿ ಗುರುತಿಸಿ ಸಾಧಕರಾಗಿದ್ದಾರೆ. ಇದಲ್ಲದೆ, ರಾಜ್ಯದ ರೋಹನ್ ಬೋಪಣ್ಣ-ಕ್ರೀಡೆ, ಅನುಪಮಾ ಹೊಸಕೆರೆ-ಕಲೆ, ಶ್ರೀಧರ್ ಮಾಕಂ ಕೃಷ್ಣಮೂರ್ತಿ-ಸಾಹಿತ್ಯ ಮತ್ತು ಶಿಕ್ಷಣ, ಕೆ.ಎಸ್. ರಾಜಣ್ಣ-ಸಮಾಜಸೇವೆ, ಡಾ.ಸಿ.ಆರ್.ಚಂದ್ರಶೇಖರ್ –ವೈದ್ಯಕೀಯ, ಶಶಿ ಸೋನಿ-ಟ್ರೇಡ್ ಮತ್ತು ಇಂಡಸ್ಟ್ರಿ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದವರು. ಇವರೆಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಅಳಿವಿನಂಚಿನ ಅಪರೂಪದ ಭತ್ತದ ತಳಿಗಳ ಬೀಜ ಬಿತ್ತಿ ತಳಿ ಸಂರಕ್ಷಣೆ ಮಾಡುವ ಕಾಸರಗೋಡಿನ ಸತ್ಯನಾರಾಯಣ ಕಿನ್ನಿಂಗಾರ್ ಬೆಳೇರಿ ಅವರಿಗೂ ಅಭಿನಂದನೆಗಳು. ಎಲ್ಲ ಪದ್ಮ ಪುರಸ್ಕøತರು ಇನ್ನಷ್ಟು ಸಾಧನೆ ಮಾಡಲು ಈ ಪ್ರಶಸ್ತಿ ಪ್ರೇರಣೆ ನೀಡಲಿ ಎಂದು ಹಾರೈಸಿದ್ದಾರೆ. ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾದ ಉದ್ಯಮಿ ಸೀತಾರಾಮ್ ಜಿಂದಾಲ್ ಅವರನ್ನೂ ಅಭಿನಂದಿಸಿದ್ದಾರೆ. ನೈಜ ಸಾಧಕರನ್ನು ಗುರುತಿಸುವ ಕೆಲಸ ಆಗಿದೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದಗಳು ಎಂದು ಅವರು ತಿಳಿಸಿದ್ದಾರೆ.
























































