ಬೆಂಗಳೂರು: “ನಮ್ಮ ಸಂವಿಧಾನವನ್ನು ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವುದಕ್ಕಾಗಿ ನಾವು ಒಗ್ಗಟ್ಟಾಗಿರಬೇಕು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರಜುನ ಖರ್ಗೆ ಕರೆ ನೀಡಿದ್ದಾರೆ..
ಕೆಪಿಸಿಸಿ ಕಚೇರಿಯಲ್ಲಿ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ಜನವರಿ 26 ವಿಶೇಷವಾದ ದಿನ. ಈ ದೇಶದಲ್ಲಿ ಸಂವಿಧಾನ ಅಸ್ತಿತ್ವದಲ್ಲಿ ಇರದಿದ್ದರೆ ನಾವು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಆಗುತ್ತಿರಲಿಲ್ಲ. ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ಮತ್ತು ಸಂವಿಧಾನ ಸಭೆಯ ನಾಯಕರು ಸೇರಿ ನಮ್ಮ ಸಂವಿಧಾನ ರಚಿಸಿದರು. ನಮ್ಮ ಸಂವಿಧಾನವು ಪ್ರಮುಖವಾಗಿ ಸಮಾನತೆ, ಭಾತೃತ್ವ, ಜಾತ್ಯಾತೀತತೆ, ನ್ಯಾಯ ತತ್ವಗಳಿಂದ ಕೂಡಿದೆ ಎಂದರು.
ಈ ಸಂವಿಧಾನ ತಿರುಚಬೇಕೆಂದು, ಸಂವಿಧಾನ ಬದಲಿಸಬೇಕೆಂದು ಆರ್ಎಸ್ಎಸ್ ಮತ್ತು ಬಿಜೆಪಿ ಪ್ರಯತ್ನ ಮಾಡುತ್ತಿವೆ. ನಮ್ಮ ಸ್ವಾಯತ್ತ ಸಂಸ್ಥೆಗಳನ್ನು ಒಂದೊಂದಾಗಿ ನಾಶಮಾಡುತ್ತಾ ಅದರ ಶಕ್ತಿಯನ್ನು ಕಡಿಮೆ ಮಾಡಲು ಬಿಜೆಪಿಯವರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಆರ್ಎಸ್ಎಸ್ನ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದು, ಅದರಿಂದ ನಮ್ಮ ದೇಶದ ನ್ಯಾಯಾಂಗಕ್ಕೆ, ಜಾತ್ಯಾತೀತತೆಗೆ ಪೆಟ್ಟು ಬೀಳುತ್ತಿದೆ ಎಂದರು.
ನಮ್ಮ ಪಕ್ಷ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ. ಆದರೆ ಬಿಜೆಪಿಯವರು ಈಗ ಬಂದು ನಾವೇ ಈ ದೇಶವನ್ನು ಕಾಪಾಡುತ್ತಿರುವವರು, ನಾವೇ ನಿಜವಾದ ದೇಶ ಭಕ್ತರು ಉಳಿದವರೆಲ್ಲರು ದೇಶದ್ರೋಹಿಗಳು ಎನ್ನುವ ಭಾವನೆಯನ್ನು ನಮ್ಮ ದೇಶದ ಯುವಕರಲ್ಲಿ ಮೂಡಿಸುತ್ತಿದ್ದಾರೆ ಎಂದವರು ಹೇಳಿದರು.
ಸ್ವಾತಂತ್ರ್ಯ ತಂದಿದ್ದೆ ಕಾಂಗ್ರೆಸ್ ಪಕ್ಷ. ಮಹಾತ್ಮ ಗಾಂಧಿಯವರು, ಪಂಡಿತ್ ಜವಾಹರ್ಲಾಲ್ ನೆಹರುರವರು, ವಲ್ಲಭಬಾಯಿ ಪಟೇಲ್ ರವರು, ಮೌಲಾನ ಅಬ್ದುಲ್ ಕಲಾಂ ಆಜಾದ್ ರವರು ಇವರಲ್ಲದೇ ಅನೇಕ ಹೋರಾಟಗಾರರು ಸೇರಿ ಹೋರಾಟದಿಂದ ನಮಗೆ ಸ್ವಾತಂತ್ರ್ಯವನ್ನು ತಂದಿದ್ದಾರೆ ಎಂದ ಖರ್ಗೆ, ನಮ್ಮ ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಮಂತ್ರಿಯವರು ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಮತ್ತು ಸಂವಿಧಾನ ಉಳಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಉಳಿಯುತ್ತದೆ. ಇಲ್ಲವಾದರೆ ಮುಂದಿನ ಪೀಳಿಗೆ ಎಲ್ಲದರಲ್ಲೂ ಅವಕಾಶ ವಂಚಿತರಾಗುತ್ತಾರೆ ಎಂದರು.
























































