ನವದೆಹಲಿ: ‘ರಾಮೋತ್ಸವ’ದ ಬೆನ್ನಲ್ಲೇ ರಾಜಕೀಯ ಕ್ಷೇತ್ರವು ಭರ್ಜರಿ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಅಚ್ಚರಿಯ ತೀರ್ಮಾನವೊಂದರಲ್ಲಿ ಕಾಂಗ್ರೆಸ್ ಶಾಸಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳಿದ್ದಾರೆ. ದೆಹಲಿಯಲ್ಲಿ ಗುರುವಾರ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಅವರನ್ನು ಭೇಟಿಯಾದ ಬಳಿಕ ಶೆಟ್ಟರ್ ಅವರು ಬಿಜೆಪಿಗೆ ಸೇರ್ಪಡೆಯಾದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಪಡೆಗೊಂಡು ಹುಬ್ಬಳ್ಳಿಯಲ್ಲಿ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಪರಾಜಿತರಾದ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಉನ್ನತ ಜವಾಬ್ಧಾರಿಯನ್ನು ವಹಿಸಿತ್ತು.
ಈ ನಡುವೆ, ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ನಂತರ ರಾಷ್ಟ್ರ ರಾಜಕೀಯದಲ್ಲಿ ಭಾರೀ ಬದಲಾವಣೆ ಆರಂಭವಾಗಿದ್ದು ಗುಜರಾತ್‌ನಲ್ಲಿ ಬುಧಾವಾರ 1500ಕ್ಕೂ ಹೆಚ್ಚು ನಾಯಕರು ಬಿಜೆಪಿ ಸೇರಿದ್ದರು. ಮರುದಿನವಾದ ಇಂದು ಮತ್ತೊಬ್ಬ ಹಿರಿಯ ನಾಯಕ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳಿದ್ದಾರೆ.
ಲೋಕ ಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ವರಿಷ್ಠ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಅವರಿಂದ ಸೂಕ್ತ ಸ್ಥಾನಮಾನದ ಭರವಸೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಶೆಟ್ಟರ್ ಅವರು ಬಿಜೆಪಿ ಸೇರುವ ಇಂಗಿತವನ್ನು ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ಅವರು ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
























































