ಬೆಂಗಳೂರು: ಹುಬ್ಬಳ್ಳಿಯ ರೈಲ್ವೆ ಕಾಲೋನಿಯಲ್ಲಿರುವ 13 ಎಕರೆ ರೈಲ್ವೆ ಇಲಾಖೆಯ ಸ್ವತ್ತನ್ನು ಕೇವಲ 83 ಕೋಟಿ ರೂ.ಗೆ 99 ವರ್ಷ ಪರಭಾರೆ ಮಾಡಲು ಹುನ್ನಾರ ನಡೆಸಲಾಗಿತ್ತು. ಐದು ಬಾರಿ ಟೆಂಡರ್ ಕರೆದು ರಿಜೆಕ್ಟ್ ಮಾಡಿದ ಹಾಗೆ ಮಾಡಿ, ಯಾರೂ ಬಂದಿಲ್ಲ ಎಂದು ಪರಭಾರೆ ಕೊಡೋಣ ಎಂಬ ಹುನ್ನಾರ ನಡೆಸಲಾಗಿತ್ತು. ಕೇಂದ್ರ ಮಂತ್ರಿಯಾಗಿರುವ ಪ್ರಹ್ಲಾದ್ ಜೋಶಿಯವರು ಮತ್ತು ಅವರ ಸಹಪಾಠಿಗಳು ಈ ಸ್ವತ್ತನ್ನು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್ ಉಗ್ರಪ್ಪ ಆರೋಪಿಸಿದ್ದಾರೆ.
ಮಾಧ್ಯಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಬಾಯಿ ಬಿಡದ ಮೌನಿ ಬಾಬಾ ಆಗಿದ್ದ ಪ್ರಹ್ಲಾದ್ ಜೋಶಿ ಅವರು ಈ ವಿಚಾರದ ಬಗ್ಗೆ ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೆವಾಲರವರು ಪ್ರಸ್ತಾಪ ಮಾಡಿದ ಮೇಲೆ ಇದ್ದಕ್ಕಿದ್ದಂತೆ ನಾನು ಕಾಂಗ್ರೆಸ್ ಮತ್ತು ಸುರ್ಜೆವಾಲರವರ ಮೇಲೆ ಕೇಸ್ ಹಾಕುತ್ತೇನೆ ಎಂದಿದ್ದರು. ಜೋಶಿ ಅವರು ಕೇಸ್ ಹಾಕಿದರೆ ಅವರ ಚರಿತ್ರೆ ಬಿಚ್ಚಿಡಲು ನಮಗೂ ಒಳ್ಳೆಯ ಅವಕಾಶ ಎಂದು ಕೇಸ್ ಹಾಕುವಂತೆ ತಿಳಿಸಿದೆವು. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯ ನಂತರ ರೈಲ್ವೇ ಇಲಾಖೆಯವರು ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನು ವಾಪಸ್ ತೆಗೆದುಕೊಂಡರು ಎಂದರು.
ಯಾರು ಟೆಂಡರ್ ಹಾಕದ ಕಾರಣ ಈ ಟೆಂಡರ್ ಪ್ರಕ್ರಿಯೆ ಕೈ ಬಿಡಲಾಗಿದೆ ಎಂದು ಪ್ರಹ್ಲಾದ್ ಜೋಶಿಯವರು ಹೇಳುತ್ತಾರೆ. ಟೆಂಡರ್ ಓಪನ್ ಮಾಡದೆಯೇ ಟೆಂಡರ್ ಯಾರು ಹಾಕಿದ್ದಾರೆ, ಯಾರೂ ಟೆಂಡರ್ ಹಾಕಿಲ್ಲ ಅನ್ನುವ ವಿಚಾರವೆಲ್ಲ ಪ್ರಹ್ಲಾದ್ ಜೋಶಿಯವರಿಗೆ ಗೊತ್ತಿದೆ. ಅಂದಮೇಲೆ ಈ ಟೆಂಡರ್ ಪ್ರಕ್ರಿಯೆಯಲ್ಲಿ ಜೋಶಿಯವರ ಕೈವಾಡ ಇದೆ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದರು.
ರಾಜ್ಯ ಕಂಡಂತಹ ಭ್ರಷ್ಟ ರಾಜಕಾರಣಿಗಳಲ್ಲಿ ಪ್ರಹ್ಲಾದ್ ಜೋಶಿ ಒಬ್ಬರು. ನಮಗೆ ಕೇಸ್ ಹಾಕುವ ಸವಾಲ್ ಹಾಕಿದ ಕರ್ನಾಟಕದ ಉತ್ತರ ಕುಮಾರ ಪ್ರಹ್ಲಾದ್ ಜೋಶಿಯವರೆ ಈ ಆದೇಶ ಆದಮೇಲೆ ಯಾವ ಮುಖ ಹೊತ್ತುಕೊಂಡಿದ್ದೀರಿ. ನಿಮಗೆ ದಮ್ ಇದ್ದರೆ, ತಾಕತ್ ಇದ್ದರೆ, ಬದ್ಧತೆಯಿದ್ದರೆ ಈಗ ನಮ್ಮ ಮೇಲೆ ಕೇಸ್ ಹಾಕಿ. ನಿಮ್ಮ ಚರಿತ್ರೆಯನ್ನು ಎಳೆ ಎಳೆಯಾಗಿ ಬಿಡಿಸಿ ಇಡುತ್ತೇವೆ ಎಂದು ಉಗ್ರಪ್ಪ ತಿಳಿಸಿದರು.
1300 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನನ್ನು ಲಪಟಾಯಿಸುವ ಸಂಚು ಮಾಡಿದ್ದೀರ. ನಿಮಗೆ ಮಾನ ಮರ್ಯಾದೆ ಇದ್ದರೆ, ಶ್ರೀರಾಮನ ಹೆಸರು ಹೇಳುವ ನೈತಿಕತೆ ಇದ್ದರೆ, ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಎಂಬ ಶ್ರೀರಾಮನ ಸಂದೇಶ ಇವರಲ್ಲಿ ಎಲ್ಲಿದೆ. ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.


























































