ನವದೆಹಲಿ: ನರೇಂದ್ರ ಮೋದಿ ಸರ್ಕಾರ ಕೆಡವಲು ರೂಪಿತವಾಗಿರುವ INDIA ಮೈತ್ರಿಕೂಟಕ್ಕೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ NDA ವಿರುದ್ಧ ಪ್ರಭಲ ಶಕ್ತಿಯಾಗಿ ಸೆಣಸಾಡಲು ಕಾರ್ಯತಂತ್ರ ರೂಪಿಸುತ್ತಿರುವ INDIA ಮೈತ್ರಿಕೂಟಕ್ಕೆ ಇದೀಗ ಆಮ್ ಆದ್ಮಿ ಪಕ್ಷ ಕೂಡಾ ಹೊಡೆತ ನೀಡಿದೆ. ಅಚ್ಚರಿಯ ತೀರ್ಮಾನವೊಂದರಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಆಪ್ ಘೋಷಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು INDIA ಮೈತ್ರಿಕೂಟದ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ಪರ್ಧಿಸುವ ತೀರ್ಮಾನ ಪ್ರಕಟಿಸಿದ ನಂತರ ಇದೀಗ ಆಪ್ ನಾಯಕರೂ ಆದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರುಕೂಡಾ ಹೊಸ ತೀರ್ಮಾನ ಘೋಷಿಸಿದ್ದಾರೆ. ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಕೂಡಾ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಭಗವಂತ್ ಮಾನ್ ಘೋಷಿಸಿದ್ದಾರೆ.
ಪಂಜಾಬ್‌ನ 13 ಸ್ಥಾನಗಳಲ್ಲಿ ಆಪ್ ಸ್ಪರ್ಧಿಸಲಿದೆ ಎಂದಿರುವ ಭಗವಂತ್ ಮಾನ್, ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮಮತಾ ಬ್ಯಾನರ್ಜಿ ಅವರಂತೆಯೇ ನಮಗೂ ಕೂಡಾ ನಮ್ಮದೇ ಆದ ನಿರ್ಧಾರವಿದೆ ಎಂದಿದ್ದಾರೆ.


























































