ಬೆಂಗಳೂರು: ಕೋಟಿ ಕೋಟಿ ರಾಮಭಕ್ತರ ಆಸೆ ಇವತ್ತು ಈಡೇರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಯೋಧ್ಯೆ ಮತ್ತು ಕನ್ನಡಿಗರಿಗೆ ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬ ಕನ್ನಡಿಗರೂ ಇಂದು ಹೆಮ್ಮೆ ಪಡುತ್ತಿದ್ದಾರೆ ಎಂದು ನುಡಿದರು. ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಲಲಾನ ಪ್ರಾಣ ಪ್ರತಿಷ್ಠೆ ಕಾರ್ಯ ನೆರವೇರಿದೆ. ಇದು ಅತ್ಯಂತ ಹೆಮ್ಮೆಯ ಮತ್ತು ಸಂತೋಷದ ವಿಚಾರ ಎಂದು ತಿಳಿಸಿದರು.
ಪ್ರತಿಯೊಬ್ಬ ಹಿಂದೂಗಳನ್ನು ಒಂದುಗೂಡಿಸುವ ಪವಿತ್ರ ಘಳಿಗೆ ಇಂದಿನದು. ಅಯೋಧ್ಯೆ, ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಳ. ಪ್ರಭು ಶ್ರೀರಾಮಚಂದ್ರನ ಪರಮ ಭಕ್ತ ಹನುಮನ ಜನ್ಮಸ್ಥಳ ಕಿಷ್ಕಿಂಧೆ ಕರ್ನಾಟಕದಲ್ಲಿದೆ ಎಂದು ನೆನಪಿಸಿದರು. ಬಲರಾಮನ ವಿಗ್ರಹಕ್ಕೆ ಶಿಲೆ ಕೂಡ ಕರ್ನಾಟಕದಿಂದ ಲಭಿಸಿದೆ. ಅದರ ಶಿಲ್ಪಿಗಳು ಕನ್ನಡನಾಡಿನವರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಅವರು ವಿಶ್ಲೇಷಿಸಿದರು. ವಿಜಯೇಂದ್ರ ಅವರು ಇಂದು ಮಹಾಲಕ್ಷ್ಮೀ ಲೇಔಟ್ನ ರಾಣಿ ಅಬ್ಬಕ್ಕ ಮೈದಾನದಲ್ಲಿ ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ನಡೆಯುವ ‘ಶ್ರೀರಾಮತಾರಕ ಮಹಾಯಾಗ-ಕಲಶಾಭಿಷೇಕ’ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಗೋಪಾಲಯ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕಾ ಅವಿನಾಶ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಮಂಜುಳಾ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಅವರು ಭಾಗವಹಿಸಿದ್ದರು.