ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು ಸಂಭವನೀಯ ಹುರಿಯಾಳುಗಳ ಯಾದಿ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅತೃಪ್ತಿ ಹೊರಹಾಕಿದ್ದಾರೆ. ಸಮರ್ಥರ ಆಯ್ಕೆ ಬಗ್ಗೆ ಅವರು ಒಲವು ಹೊಂದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ಹಂಚಿಕೊಂಡ ಡಿ.ಕೆ.ಶಿ, ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಬಂದಿರುವ ವರದಿಗಳು ತೃಪ್ತಿಕರವಾಗಿಲ್ಲ. ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿಗಳು, ನಾನು ಹಾಗೂ ಎಐಸಿಸಿ ಸಮೀಕ್ಷೆ ನಡೆಸುತ್ತಿದ್ದೇವೆ. ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ನಾವು ಚರ್ಚೆ ಮಾಡಿದ್ದು, ಅದನ್ನು ಕಾರ್ಯಕರ್ತರ ಕೈಯಲ್ಲಿ ಹಂಚಿಕೆ ಮಾಡಿಸಲು ತೀರ್ಮಾನಿಸಿದ್ದೇವೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ಬಗ್ಗೆ ಎಐಸಿಸಿ ನಾಯಕರು ನಮಗೆ ಅಜೆಂಡಾ ನಿಗದಿ ಮಾಡಿದ್ದಾರೆ. 28 ಕ್ಷೇತ್ರಗಳಿಗೆ ಮಂತ್ರಿಗಳನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದು, ನಾಳೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಾಲ್ಕು ರಾಜ್ಯಗಳ ಸಚಿವರುಗಳ ಸಭೆ ಕರೆಯಲಾಗಿದೆ. ಅಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ತಿಳಿಸುತ್ತಾರೆ ಎಂದವರು ಮಾಹಿತಿ ಒದಗಿಸಿದರು.
ನಮ್ಮ ಬಳಿ ಹೆಚ್ಚಿನ ಕಾಲಾವಕಾಶವಿಲ್ಲ. ನಮ್ಮ ಕ್ಷೇತ್ರಗಳಲ್ಲಿ ಕೆಲಸ ಆರಂಭಿಸಬೇಕಿದೆ. ಕಳೆದ ಚುನಾವಣೆಯಲ್ಲಿ ತೋರಿದ ಒಗ್ಗಟ್ಟನ್ನು ಈ ಬಾರಿಯ ಚುನಾವಣೆಯಲ್ಲಿ ಇನ್ನೂ ದೊಡ್ಡದಾಗಿ ಪ್ರದರ್ಶಿಸಬೇಕಿದೆ. ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿ ಬಗ್ಗೆ ಗಮನಹರಿಸಬೇಕು. ಪಕ್ಷ ನಮ್ಮ ಮೇಲೆ ಭರವಸೆ ಇಟ್ಟುಕೊಂಡಿದ್ದು, ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಪ್ರತಿಪಾದಿಸಿದ ಡಿಕೆಶಿ, ಕಾರ್ಯಕರ್ತರ ಬಲವರ್ಧನೆಗಾಗಿ ಕಳೆದ ಒಂದು ವಾರದಿಂದ ಎಐಸಿಸಿ ನಾಯಕರ ಜತೆ ಚರ್ಚೆ ಮಾಡಿ ಕೆಲವು ನಿರ್ಧಾರಗಳನ್ನು ಮಾಡಿದ್ದೇವೆ. ಐದು ಗ್ಯಾರಂಟಿ ಯೋಜನೆಗಳು ಪ್ರತಿಯೊಂದು ಕುಟುಂಬದ ಅಭಿವೃದ್ಧಿಗೆ ಪೂರಕವಾಗಿರುವ ವಿಚಾರವನ್ನು ನೀವು ಜನರಿಗೆ ಮನದಟ್ಟು ಮಾಡಿಕೊಡಬೇಕು ಎಂದರು



















































