ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ದದ 2011ರ ಚೆಕ್‌ಬೌನ್ಸ್ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕಟಿಸಿರುವ ತೀರ್ಪು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರದ ಸನ್ನಿವೇಶವನ್ನು ತಂದೊಡ್ಡಿದೆ.
ಸಚಿವ ಮಧು ಬಂಗಾರಪ್ಪ ಅವರಿಗೆ ನ್ಯಾಯಾಲಯ 6.96 ಕೋಟಿ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದು. ದಂಡ ಪಾವತಿ ಮಾಡದಿದ್ದರೆ 6 ತಿಂಗಳು ಜೈಲುವಾಸ ಅನುಭವಿಸುವಂತೆ ತೀರ್ಪು ಪ್ರಕಟಿಸಿದೆ.
ಈ ತೀರ್ಪನ್ನು ಅಸ್ತ್ರವಾಗಿಸಿರುವ ಪ್ರತಿಪಕ್ಷ ಬಿಜೆಪಿ, ಸಿದ್ದರಾಮಯ್ಯ ಸರ್ಕಾರದ ವಿರುದ್ದ ಮುಗಿಬಿದ್ದಿದೆ. ಶಿಕ್ಷೆಗೆ ಗುರಿಯಾಗಿರುವ ಮಧು ಬಂಗಾರಪ್ಪ ರಾಜೀನಾಮೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಶಿಕ್ಷಣ ಸಚಿವರು ಚೆಕ್ ಬೌನ್ಸ್ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದೆ. ಇದು ಸರ್ಕಾರದ ಘನತೆ ಅಷ್ಟೇ ಅಲ್ಲದೇ ಶಿಕ್ಷಣದ ಪಾವಿತ್ರ್ಯತೆಗೆ ತಗುಲಿದ ಕಪ್ಪು ಚುಕ್ಕೆಯಾಗಿದೆ ಎಂದಿರುವ ವಿಜಯೇಂದ್ರ,. ಮಂತ್ರಿ ಮಧು ಬಂಗಾರಪ್ಪ ಅವರು ರಾಜೀನಾಮೆ ನೀಡಿ ತಮ್ಮ ನೈತಿಕತೆ ಪ್ರದರ್ಶಿಸಲಿ, ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಸಚಿವರ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದ್ದಾರೆ.






















































