ಬೆಂಗಳೂರು: ಮೀಸಲಾತಿಗಾಗಿ ಪಂಚಮಸಾಲಿ ಲಿಂಗಾಯಿತ ಸಮುದಾಯದ ಹೋರಾಟ ತೀವ್ರಗೊಂಡಿದೆ. ಧರ್ಮ ಕ್ಷೇತ್ರ ಕೂಡಲಸಂಗಮ ಮಹಾಪೀಠದ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಸರಣಿ ಹೋರಾಟ ಈ ತಿಂಗಳ 23ರಂದು ರಾಯಚೂರು ಜಿಲ್ಲೆ ಲಿಂಗಸುರಿನಲ್ಲಿ ವಿನೂತನ ರೀತಿಯ ಹೋರಾಟ ಆಯೋಜಿತವಾಗಿದೆ.
ಈ ಬಾರಿ ‘ರಕ್ತ ಕೊಡುತ್ತೇವೆ, ಮೀಸಲಾತಿ ಪಡೆಯುತ್ತೇವೆ’ ಎಂಬ ಘೋಷಣೆಯೊಂದಿಗೆ ರಣಕಹಳೆ ಮೊಳಗಿಸಿರುವ ಬಸವಜಯ ಮೃತ್ಯುಂಜಯ ಶ್ರೀಗಳು ಅಂದು ಮಧ್ಯಾಹ್ನ 1 ಗಂಟೆಗೆ ಲಿಂಗಸಗೂರಿನಲ್ಲಿ ‘ರಕ್ತ ದಾಸೋಹ’ ಕಾರ್ಯಕ್ರಮ ಮೂಲಕ ಸಮುದಾಯದ ಒಗ್ಗಟ್ಟಿಗೆ ಕರೆಕೊಟ್ಟಿದ್ದಾರೆ.
ಈ ಕಾರ್ಯಕ್ರಮದ ನಂತರವೂ ವಿವಿಧೆಡೆ ಹೋರಾಟ ನಿಗದಿಯಾಗಿದೆ. ಅಮರೇಶ್ವರರ ಜನ್ಮಸ್ಥಳ ಲಿಂಗಸುರ್ ತಾಲೂಕಿನ ಯರಡೋನಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಸೆಂಬರ್ 24 ಭಾನುವಾರದಂದು ರಾಯಚೂರು ಜಿಲ್ಲಾ ಮಟ್ಟದ ‘ಪಂಚಮಸಾಲಿ ಮೀಸಲಾತಿಗಾಗಿ ಇಷ್ಟಲಿಂಗ ಪೂಜೆ’ಯೊಂದಿಗೆ ಹೋರಾಟ, ಹಕ್ಕೊತ್ತಾಯ ಸಮಾವೇಶ ಆಯೋಜಿತವಾಗಿದೆ. ಜೊತೆಗೆ ಕಿತ್ತೂರು ಚೆನ್ನಮ್ಮ ಜಯಂತಿ ವಿಜಯೋತ್ಸವ, ಪಂಚಮಸಾಲಿ – ಗೌಡ – ಮಲೆಗೌಡ – ದೀಕ್ಷೆ ಲಿಂಗಾಯತರಿಗೆ 2A ಮೀಸಲಾತಿ ಅನುಷ್ಠಾನ ಹಾಗೂ ಲಿಂಗಾಯತ ಉಪ ಸಮಾಜಗಳನ್ನು OBC ಮೀಸಲಾತಿಗೆ ಕೂಡಲೇ ಶಿಫಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ ಯರಡೋನಿ ರಾಜ್ಯ ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ನಡೆಸಲಾಗುತ್ತದೆ ಎಂದು ಜಯಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ.



















































