ಬೆಂಗಳೂರು : ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಎರಡು ಇಂದಿರಾ ಕ್ಯಾಂಟಿನ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುಮಾರು 15000 ಖಾಸಗಿ ಕ್ಯಾಬ್/ಟ್ಯಾಕ್ಸಿ ಚಾಲಕರು ಬಹುದಿನಗಳಿಂದ ಉತ್ತಮ ಗುಣಮಟ್ಟದ ಆಹಾರವನ್ನು ಕಡಿಮೆ ದರದಲ್ಲಿ ಒದಗಿಸುವ ಇಂದಿರಾ ಕ್ಯಾಂಟಿನನ್ನು ತೆರೆಯುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಇಂದಿರಾ ಕ್ಯಾಂಟಿನ್ ತೆರೆಯುವುದಾಗಿ ಭರವಸೆ ನೀಡಿದ್ದರು. ಅದರಂತೆ 15.11.2023ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿಕಟಪೂರ್ವ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದರು.
21.12.2023ರ ಸಚಿವ ಸಂಪುಟ ಸಭೆಯು ಎಲ್ಲಾ ಖಾಸಗಿ ಕ್ಯಾಬ್/ಟ್ಯಾಕ್ಸಿ ಚಾಲಕರಿಗೆ ಅನುಕೂಲವಾಗುವಂತೆ ಎರಡು ಇಂದಿರಾ ಕ್ಯಾಂಟಿನ್ ತೆರೆಯಲು ಅಡುಗೆ ಮನೆ ಸಹಿತ ಕ್ಯಾಂಟೀನ್ ನಿರ್ಮಾಣ ವೆಚ್ಚ ರೂ.87 ಲಕ್ಷ ಹಾಗೂ 1 ಕ್ಯಾಂಟೀನ್ ರೂ. 48 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಪ್ರದೇಶದಲ್ಲಿ ಇಂದಿರಾ ಕ್ಯಾಂಟಿನ ನಿರ್ಮಾಣಕ್ಕೆ ಸ್ಥಳವನ್ನು ನೀಡಲು BIAL ಅಧಿಕಾರಿಗಳು ಈಗಾಗಲೇ ಒಪ್ಪಿರುತ್ತಾರೆ. ಇದರಿಂದಾಗಿ ಸರಿ ಸುಮಾರು ಒಂದು ಹೊತ್ತಿಗೆ 4000 ಚಾಲಕರಿಗೆ ವಾರ್ಷಿಕ ರೂ. 5.40 ಕೋಟಿ ವೆಚ್ಚ ತಗುಲಲಿದೆ. ಸದರಿ ಒಟ್ಟು ಮೊತ್ತದಲ್ಲಿ 50% ಸರ್ಕಾರವು ಭರಿಸಲಿದ್ದು, 50%ನ್ನು ಬಿಬಿಎಂಪಿ ಭರಿಸಲಿದೆ ಎಂದವರು ತಿಳಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡಾ ಈ ಯೋಜನೆ ತರುವಲ್ಲಿ ಹೆಚ್ಚು ಸಹಕಾರ ನೀಡಿ, ಎರಡು ಕ್ಯಾಂಟಿನ್ ನಿರ್ಮಾಣದ ಯೋಜನೆಗೆ ಧನಸಹಾಯ ಒದಗಿಸಿದ್ದಾರೆ. ಅದರಂತೆ ನುಡಿದಂತೆ ನಡೆಯುವುದು ಎಂದರೆ ಏನು ಎಂಬುದನ್ನು ಸರ್ಕಾರ ತೋರಿಸಿ ಕೊಟ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.











































































